ಶಿರಸಿ: ಇಎಸ್‌ಐ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಲಭ್ಯವಿದ್ದರೂ ಖಾಸಗಿ ಆಸ್ಪತ್ರೆಗೆ ಶಿಫಾರಸು ನೀಡುವಿಕೆ ಹೆಚ್ಚುತ್ತಿದೆ. ಈ ಶಿಫಾರಸು ಪತ್ರದ ಮಾಫಿಯಾದಿಂದ ಕಾರ್ಮಿಕ ಆಸ್ಪತ್ರೆಗಳು ಹೊರ ಬರಬೇಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಮಂಗಳವಾರ ಇಲ್ಲಿನ ಟಿಎಸ್‌ಎಸ್ ಮಾರ್ಕೆಟ್ ಯಾರ್ಡ್ ಆವರಣದಲ್ಲಿ ಸ್ಥಾಪಿಸಲಾದ ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕರು ತೀವ್ರ ತರದ ಆರೋಗ್ಯ ಸಮಸ್ಯೆ ಎದುರಿಸಿದಾಗ ಮತ್ತು ಈ ಆಸ್ಪತ್ರೆಗಳಲ್ಲಿ ಸಾಧ್ಯವಾಗದಿದ್ದಾಗ ಶಿಫಾರಸು ಪತ್ರ ಪಡೆದು ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ರೀತಿ ಪ್ರತಿಯಾಗಿ ವರ್ಷ ರಾಜ್ಯದೆಲ್ಲೆಡೆ 25 ಕೋಟಿ ರೂ. ಹಣವನ್ನು ವಿವಿಧ ಆಸ್ಪತ್ರೆಗಳಿಗೆ ನೀಡುತ್ತಿದ್ದೇವೆ. ಈ ಶಿಫಾರಸು ಪತ್ರ ನೀಡುವಿಕೆ ನಿಲ್ಲಬೇಕು, ಇಎಸ್ಐ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ನಮ್ಮ ಆಸ್ಪತ್ರೆಗಳಲ್ಲಿ 55 ಕೋಟಿ ರೂ. ಯಂತ್ರೋಪಕರಣ ಖರೀದಿಸಿದ್ದೇವೆ. ಅಲ್ಲದೇ ಇಎಸ್‌ಐ ಆಸ್ಪತ್ರೆಯ ಕೆಲ ವೈದ್ಯರೇ ಖಾಸಗೀ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ನೀಡುತ್ತಾರೆ. ಆಸ್ಪತ್ರೆಯಲ್ಲಿ ಎಲ್ಲವೂ ಇದ್ದರೂ ಶಿಫಾರಸ್ಸು ಪತ್ರ ಬೇಕು ಎನ್ನುವ ಬೇಡಿಕೆ ಬರುತ್ತದೆ. ಹೀಗಾಗಿ ಜನರು ಈ ಮಾನಸಿಕತೆಯಿಂದ ಹೊರ ಬರಬೇಕಿದೆ ಎಂದರು.
ರಾಜ್ಯದ ವಿವಿಧೆಡೆ 9 ಇಎಸ್ಐ ಆಸ್ಪತ್ರೆಗಳಿಗೆ ಕಟ್ಟಡ ನಿರ್ಮಾಣ ಕಾರ್ಯ ಆರಂಭ ಆಗಿದೆ. 3ಸಾವಿರ ಕೋಟಿ ರೂ. ಕಟ್ಟಡಗಳಿಗಾಗಿ ಬಳಕೆ ಮಾಡುತ್ತಿದ್ದೇವೆ. ಇ ಎಸ್ ಐ ಆಸ್ಪತ್ರೆಗಳನ್ನು ಇನ್ನಷ್ಟು ವಿಸ್ತರಿಸುತ್ತಿದ್ದೇವೆ. ಇಎಸ್ಐ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ 130 ಕೋಟಿ ರೂ. ಔಷಧ ಇದೆ. ಇಎಸ್ಐ ವ್ಯಾಪ್ತಿಗೆ ಬರದ ಕಾರ್ಮಿಕ ಬಂದರೆ ಅಸಡ್ಡೆ ತೋರಿಸಬೇಡಿ. ಬಡವರ ಆಸ್ಪತ್ರೆ ಇದಾಗಬೇಕು ಎಂದರು.
ಜಿಲ್ಲೆಯ ಮೊದಲ ಇಎಸ್ಐ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಗಾಗಿ ಕಾರ್ಮಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಶಿರಸಿ ಬೆಳೆಯುತ್ತಿರುವ, ಜಿಲ್ಲೆಯ ಕೇಂದ್ರ ಸ್ಥಾನ. ಹಲವು ಇಲಾಖೆಗಳ ಕೇಂದ್ರ ಕಚೇರಿ ಇಲ್ಲಿದೆ. ಈ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಇಎಸ್ಐ ಆಸ್ಪತ್ರೆ ಆರಂಭಿಸಿದ್ದೇವೆ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಾರ್ಮಿಕರು ಸಮಾಜದ ಬೆನ್ನೆಲುಬಿದ್ದಂತೆ. ಶಿರಸಿಯಲ್ಲಿ 5 ಸಾವಿರ ಜನ ಸಂಘಟಿತ ಕಾರ್ಮಿಕರಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಕಾರ್ಮಿಕರಿಗೆ ಶುಶ್ರೂಷೆ ಮಾಡುವ ಜೊತೆ ಇಎಸ್ ಐ ಕಾರ್ಡ್ ಪಡೆದುಕೊಳ್ಳುವ ಬಗ್ಗೆಯೂ ಮಾಹಿತಿ ನೀಡಬೇಕು. ವೈದ್ಯರು ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಬೇಕು. ಪ್ರತಿಯೊಬ್ಬರೂ ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಂಡು ನಮ್ಮ ಆರೋಗ್ಯ ಕೆಡದಂತೆ ನಾವು ಕಾಯ್ದುಕೊಳ್ಳಬೇಕು ಎಂದರು.
ಇಎಸ್ ಐ ನಿರ್ದೇಶಕ ಎನ್ ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದ ಅನುದಾನದಲ್ಲಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 113 ಇಎಸ್ ಐ ಚಿಕಿತ್ಸಾಲಯವಿದ್ದು 17 ಚಿಕಿತ್ಸಾಲಯ ಆರಂಭಿಕ ಹಂತದಲ್ಲಿದೆ ಎಂದರು.
ವೇದಿಕೆಯಲ್ಲಿ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್, ಡಾ. ಯುನಸ್ ನಜ್ಮಿ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಕಾರ್ಮಿಕ ಮುಖಂಡ ನಾಗಪ್ಪ ಇದ್ದರು.