ಹಳಿಯಾಳ: ಮಾನವ ಕುಲದ ಉಳಿವಿಗೆ ಹಾವಿನ ಸಂತತಿಯ ರಕ್ಷಣೆ ಅತಿ ಮುಖ್ಯವಾದದ್ದು. ಹಾವಿನ ಸಂತತಿ ಅಳಿದರೆ ಮಾನವನ ಆಯಸ್ಸು 46 ಗಂಟೆಗಳಿಗಿಂತ ಕಡಿಮೆ ಎಂದು ಪರಿಸರ ತಜ್ಞ, ಟ್ರೊಪಿಕಲ್ ರೇನ್ ಫಾರೆಸ್ಟ್ ಇಕೊಲೊಜಿಕಲ್ ಕ್ಯಾಂಪ್ನ ನಿರ್ದೇಶಕರೂ ಆಗಿರುವ ಶಿರಸಿಯ ಸುಹಾಸ ಹೆಗಡೆ ಹೇಳಿದರು.
ಶ್ರೀದುರ್ಗಾಭವಾನಿ ಎಂಟರ್ಪ್ರೈಸಸ್ ಪ್ರಾಯೋಜಕತ್ವದಲ್ಲಿ ತಾಲೂಕಿನ ಅರ್ಲವಾಡ ಗ್ರಾಮದಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ಮತ್ತು ಅದರ ರಕ್ಷಣೆಗಾಗಿ ಶಾಲಾ ಹಂತದ ಪ್ರಕೃತಿ ಇಕೋ ಕ್ಲಬ್ ಅಡಿಯಲ್ಲಿ ಹಾವು ನಾವು ಪರಿಸರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಸಂಪೂರ್ಣ ಕೇಂದ್ರೀಕೃತ ವಿಷಯ ಹಾವು ಮತ್ತು ಅದರ ರಕ್ಷಣೆ ಆಗಿದ್ದು, ಹಾವಿನ ಎಲ್ಲಾ ವಿಧಗಳನ್ನು ಶಾಲಾ ಮಕ್ಕಳಿಗೆ ವಿವರಿಸಿದ ಹೆಗಡೆ ಅವರು ಹಾವಿನಲ್ಲಿ ಅತೀ ವಿಷ, ಸಾಧಾರಣ ವಿಷ ಮತ್ತು ವಿಷ ರಹಿತ ಹಾವುಗಳೆಂದು ಮೂರು ವಿಧದ ವರ್ಗೀಕರಿಸಿ ಅದರಲ್ಲೂ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಣ ಸಿಗುವ 200ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಪರಿಚಯಿಸಿ ಹಾವು ಇವತ್ತಿನ ಜೀವ ಜಗತ್ತಿನ ಅಮೂಲ್ಯ ವಸ್ತು, ಹಾವಿನ ವಿಷದಿಂದ ಅಂದಾಜು 300ಕ್ಕೂ ಹೆಚ್ಚು ವಿವಿಧ ರೋಗಗಳಿಗೆ ಔಷಧಗಳನ್ನು ತಯಾರಿಸಲಾಗುತ್ತಿದೆ ಮತ್ತು ಹಾವು ಮನುಷ್ಯನಿಗೆ ಹೇಗೆ ಉಪಯುಕ್ತ ಎನ್ನುವುದನ್ನು ಹಾವನ್ನು ಉಳಿಸಿಕೊಂಡು ನಾವು ಬದುಕುವ ರೀತಿಯನ್ನು ಮಾರ್ಮಿಕವಾಗಿ ವಿವರಿಸಿದರು.
ವೇದಿಕೆಯಲ್ಲಿ ಯಲ್ಲಾಪುರ ಸ್ಪೋರ್ಟ್ಸ್ ಎಂಡ್ ಎಡ್ವೆಂಚರ್ ಕ್ಲಬ್ನ ನಿರ್ದೇಶಕ ಜಯಂತ ಮಾವಳ್ಳಿ, ದುರ್ಗಾಭವಾನಿ ಎಂಟರ್ಪ್ರೈಸಸ್ ಮಾಲಕ ಸಂಜು ಪಿ.ಕೋಳೂರ, ಪ್ರಮುಖರಾದ ದರ್ಶನ ಹಿರೇಮಠ, ಶಾಲಾ ಮುಖ್ಯೋಪಾಧ್ಯಾಯರಾದ ಅನುಸೂಯಾ ಸಮಗೊಂಡ ಇದ್ದರು. ಶಿಕ್ಷಕರಾದ ದಿನೇಶ ನಾಯ್ಕ, ನಾಗವೇಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಪ್ರಕೃತಿಯಲ್ಲಿ ಹಾವು ಎನ್ನುವ ಸಂಪೂರ್ಣ ಹಾವಿನ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.