ಶಿರಸಿ: ನಗರದ ಹೃದಯ ಭಾಗದಲ್ಲಿರುವ ದೇವಿಕೆರೆಯನ್ನು ನಗರಸಭೆ ಪೌರಾಯುಕ್ತ ಕೇಶವ ಚೌಗುಲೆಯವರು ಸಿಬ್ಬಂದಿಗಳ ಸಹಾಯದಿಂದ ಸ್ವತಃ ತಾವೇ ತೆಪ್ಪದಲ್ಲಿ ತೆರಳಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಇವರಿಗೆ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸುನೀಲ್ ಗಾವಡೆ ನೆರವಾದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆಯ ಅನುದಾನದಿಂದ ಇತ್ತೀಚಿಗಷ್ಟೇ ಗಿಡಗಂಟಿಗಳಿ0ದ ತುಂಬಿದ್ದ ದೇವಿಕೆರೆಯನ್ನು ಅಭಿವೃದ್ಧಿಗೊಳಿಸಿ ದೇವಿಕೆರೆ ಉದ್ಯಾನವನವೆಂದು ನಾಮಕರಣ ಮಾಡಲಾಗಿತ್ತು. ಆದರೆ ಕೆಲವು ಅನಾಗರಿಕರು ದೇವಿಕೆರೆಯನ್ನು ದುರ್ಬಳಕೆ ಮಾಡಿ ಪಿಂಡ, ಕಾಯಿ ಇನ್ನಿತರ ವಸ್ತುಗಳನ್ನು ಎಸೆದು ದೇವಿಕೆರೆಯ ಅಂದಗೆಡವಿದ್ದರು.
ಈ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ನಗರಸಭೆಯಿಂದ ಸ್ವಚ್ಛಗೊಳಿಸಲಾಗಿತ್ತು. ಇಷ್ಟಾದರೂ ಅನಾಗರಿಕರು ಮಾತ್ರ ಮತ್ತೆ ಮತ್ತೆ ಕೆರೆಯಲ್ಲಿ ಹಾಳುಮೂಳುಗಳನ್ನು ಎಸೆದು ದೇವಿಕರೆಯ ಅಂದಕ್ಕೆ ಚ್ಯುತಿ ಬರುವಂತೆ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಪೌರಾಯುಕ್ತರು ಶನಿವಾರ ಬೆಳಿಗ್ಗೆ ಸ್ವತಃ ತಾವೇ ಹಿರಿಯ ಆರೋಗ್ಯ ನಿರೀಕ್ಷಕರೊಂದಿಗೆ ದೇವಿಕೆರೆಗೆ ತೆಪ್ಪದಲ್ಲಿ ಸಾಗಿ ಕೆರೆಯಲ್ಲಿದ್ದ ಗಿಡಗಂಟಿ, ಪಿಂಡದ ವಸ್ತು, ಕಾಯಿಗಳನ್ನು ತೆಗೆದು ಸ್ವಚ್ಚಗೊಳಿಸಿದರು.
ದೇವಿಕೆರೆಯ ಅಂದ ಕಾಪಾಡುವುದು ಕೇವಲ ನಗರಸಭೆಯದ್ದಲ್ಲ. ಸಾರ್ವಜನಿಕರು ಕೂಡಾ ಇದಕ್ಕೆ ಹೊಣೆಗಾರರು. ನಾವು ಎಷ್ಟೇ ಜಾಗೃತಿ ಮೂಡಿಸಿದರೂ ಯಾರೂ ತಿಳಿದುಕೊಳ್ಳುತ್ತಿಲ್ಲ. ಕಸದಬುಟ್ಟಿಯನ್ನು ದೇವಿಕರೆಯ ಅಲ್ಲಲ್ಲಿ ಇಡಲಾಗಿದ್ದರೂ ಜನರು ಮಾತ್ರ ತಾವು ಕುಂತಲ್ಲೇ ಎಸೆದು ಹೋಗುತ್ತಿದ್ದಾರೆ. ದಯವಿಟ್ಟು ಜನರು ನಗರದ ಸ್ವಚ್ಚತೆಯ ಬಗ್ಗೆ ಎಚ್ಚರ ವಹಿಸಬೇಕು.
• ಕೇಶವ ಚೌಗುಲೆ, ಪೌರಾಯುಕ್ತ