ಕಾರವಾರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ರಂಗೇರುತ್ತಿದೆ. ಇದರ ನಡುವೆ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ರಾಜಕೀಯ ಕಿತ್ತಾಟ, ಇದೀಗ ವೈಯಕ್ತಿಕ ಕಿತ್ತಾಟದವರೆಗೆ ಇಳಿಯುವಂತಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ತಿಂಗಳುಗಳು ಮಾತ್ರ ಉಳಿದಿದ್ದು ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಈ ಬಾರಿ ಅಧಿಕಾರಕ್ಕೆ ಮತ್ತೊಮ್ಮೆ ಬರಲೇ ಬೇಕು ಎಂದು ಬಿಜೆಪಿ ಹರಸಾಹಸಕ್ಕೆ ಇಳಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಏರಲು ತಮ್ಮ ತಂತ್ರಗಾರಿಕೆಯನ್ನ ಪ್ರಾರಂಭಿಸಿದೆ. ಇನ್ನು ಕ್ಷೇತ್ರಗಳಲ್ಲಿ ಚುನಾವಣಾ ಅಖಾಡಕ್ಕೆ ಇಳಿಯುವ ನಾಯಕರುಗಳು ಪ್ರಚಾರ ಕಾರ್ಯಕ್ಕೆ ಸದ್ದಿಲ್ಲದೇ ಇಳಿದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಈ ಬಾರಿ ಸಾಕಷ್ಟು ಸದ್ದು ಮಾಡಿರುವ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಕಿತ್ತಾಟ ಜೋರಾಗಿದ್ದು, ರಾಜಕೀಯವಾಗಿ ನಡೆಯಬೇಕಾಗಿದ್ದ ಕಿತ್ತಾಟ ಇದೀಗ ವೈಯಕ್ತಿಕ ವಿಚಾರದ ವರೆಗೂ ಬಂದು ನಿಂತಿದೆ. ಹಾಲಿ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದಾರೆ, ಭೂಮಿಪೂಜೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಗಳನ್ನ ಸತೀಶ್ ಸೈಲ್ ಮಾಡಿದ್ದರು. ಇದಾದ ನಂತರ ಶಾಸಕಿ ರೂಪಾಲಿ ನಾಯ್ಕ ಬೆಂಬಲಿಗರು ಸೈಲ್ ವಿರುದ್ಧ ಹರಿಹಾಯ್ದಿದ್ದು ಸೈಲ್ ಅವಧಿಯಲ್ಲಿ ಆದ ಭ್ರಷ್ಟಾಚಾರದ ವಿರುದ್ಧವೂ ಪ್ರಶ್ನಿಸಿದ್ದರು. ಸ್ವತಃ ಶಾಸಕಿ ರೂಪಾಲಿ ನಾಯ್ಕ ಸಹ ಪತ್ರಿಕಾಗೋಷ್ಟಿಯಲ್ಲಿ ಸೈಲ್ ವಿರುದ್ಧ ಹರಿಹಾಯ್ದಿದ್ದರು.
ಆದರೆ ರಾಜಕೀಯವಾಗಿ ನಡೆಯುತ್ತಿದ್ದ ಕಿತ್ತಾಟ ಇದೀಗ ವೈಯಕ್ತಿಕ ಕಿತ್ತಾಟಕ್ಕೆ ಇಳಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವೈಯಕ್ತಿಕವಾಗಿ ಆರೋಪ ಪ್ರತ್ಯಾರೋಪವನ್ನ ಮಾಡುತ್ತಿದ್ದು ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಇಷ್ಟೊಂದು ವೈಯಕ್ತಿಕವಾಗಿ ರಾಜಕೀಯ ಮಾಡಿದ ಉದಾಹರಣೆ ಇಲ್ಲದ ಕಾರಣ ಕ್ಷೇತ್ರದ ಜನರಿಗೂ ಇದು ವಿಚಿತ್ರ ಎನಿಸುವಂತಾಗಿದೆ. ಇಬ್ಬರು ನಾಯಕರ ಪ್ರಾರಂಭದ ಜೀವನಗಳ ಬಗ್ಗೆ, ಹಣ ಮಾಡಿದ ಬಗ್ಗೆ ಆರೋಪಗಳನ್ನ ಮಾಡುತ್ತಿರುವುದು, ಚುನಾವಣಾ ಸಂದರ್ಭದಲ್ಲಿ ಇಂತಹ ಆರೋಪಗಳು ಅಗತ್ಯವಿದೆಯೇ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ರಾಜಕೀಯ ಟೀಕೆಗಳನ್ನ ಒಪ್ಪಿಕೊಳ್ಳುವ ಕೆಲ ಸಾರ್ವಜನಿಕರು ಈ ವೈಯಕ್ತಿಕ ಟೀಕೆಗಳನ್ನ ನೋಡಿ ಇಂತಹ ರಾಜಕೀಯ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಅಸಮಾಧಾನವನ್ನ ಸಹ ವ್ಯಕ್ತಪಡಿಸುವಂತಾಗಿದೆ.
ಮೊದ ಮೊದಲು ಬೆಂಬಲಿಗರ ಮೂಲಕ ಈ ವೈಯಕ್ತಿಕ ಟೀಕೆಗಳನ್ನ ಮಾಡಿದ ನಾಯಕರು ಇದೀಗ ಸ್ವತಃ ಖುದ್ದಾಗಿ ತಾವೇ ಟೀಕೆಗೆ ಇಳಿದಿದ್ದು ಈ ವೈಯಕ್ತಿಕ ಆರೋಪ ಪ್ರತ್ಯಾರೋಪ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ವೈಯಕ್ತಿಕ ಕಿತ್ತಾಟ ಇಬ್ಬರಲ್ಲಿ ಯಾವ ನಾಯಕರಿಗೆ ಫ್ಲಸ್ ಆಗಲಿದೆಯೋ, ಅಥವಾ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತಾಗಲಿದೆಯೇ ಅನ್ನುವುದನ್ನ ಕಾದು ನೋಡಬೇಕಾಗಿದೆ.
ಕಾಣದ ಕೈಗಳ ಆಟ…?
ಹಾಲಿ ಮಾತ್ತು ಮಾಜಿ ಶಾಸಕರ ನಡುವಿನ ಈ ಕಿತ್ತಾಟದ ಹಿಂದೆ ಕಾಣದ ಕೈಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಇಬ್ಬರು ನಾಯಕರುಗಳಿಗೆ ಪ್ರಚೋದನೆ ಮಾಡಿ ಈ ರೀತಿ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುವಂತೆ ಕೆಲ ಕಾಣದ ಕೈ ಗಳು ಮಾಡುತ್ತಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಈ ರೀತಿಯ ಕಾಣದ ಕೈಗಳ ಆಟದಿಂದ ವೈಯಕ್ತಿಕ ಕಿತ್ತಾಟದ ರಾಜಕೀಯ ಪ್ರಾರಂಭವಾಗಿದ್ದು ಚುನಾವಣೆ ಮುಗಿದ ನಂತರವೂ ಇದು ದ್ವೇಷದ ರಾಜಕೀಯ ಮಾಡಲು ಕಾರಣವಾಗಲಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.