ಗೋಕರ್ಣ: ಮಾತೃತ್ವ ಹಾಗೂ ಗುರುತ್ವದ ಸಮಾಗಮದಿಂದಷ್ಟೇ ಲೋಕ ಕಲ್ಯಾಣ ಸಾಧ್ಯ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ ಅಡಿಗ ಅವರ ನಿವಾಸದಲ್ಲಿ ನಡೆದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮೀಜಿಯವರ ಆರಾಧನಾ ಮಹೋತ್ಸವ ಮತ್ತು ಪಾಂಡಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಕೊಲ್ಲೂರು ಇಡೀ ದೇಶಕ್ಕೆ ಅನುಗ್ರಹದ ಕಿಂಡಿ ಇದ್ದಂತೆ. ದೊಡ್ಡಗುರುಗಳ ಆರಾಧನೆ ಇಲ್ಲಿ ನಡೆಯುತ್ತಿರುವುದು ದೇಶ ಕಾಲಗಳ ಸಮಾಗಮ. ಕೊಲ್ಲೂರಿನಲ್ಲಿ ಶಕ್ತಿಸ್ವರೂಪಿಣಿ ಮೂಕಾಂಬಿಕೆ ಹಾಗೂ ದೊಡ್ಡ ಗುರುಗಳ ಸಾನ್ನಿಧ್ಯ ದೈವೇಚ್ಛೆ. ತಾಯಿ- ಗುರುಗಳ ಸಮಾಗಮವೇ ಸತ್ಯ. ತಾಯಿ- ಗುರುವನ್ನು ಉಪೇಕ್ಷಿಸುವವರು ಯಾವ ಯಜ್ಞ ಯಾಗಾದಿಗಳನ್ನು ಮಾಡಿದರೂ ಫಲವಿಲ್ಲ. ತಾಯಿ ಎಂದರೆ ಹೃದಯ. ಗುರು ಎಂದರೆ ದೃಷ್ಟಿ. ತಾಯಿ ವಾತ್ಸಲ್ಯವನ್ನು ನೀಡಿದರೆ, ಗುರು ಜೀವಕ್ಕೆ ದೃಷ್ಟಿಯನ್ನು ಕೊಡುತ್ತಾನೆ ಎಂದು ವಿಶ್ಲೇಷಿಸಿದರು.
ಗುರುವಿಗೆ ಅಳಿವಿಲ್ಲ. ಗುರು ತ್ರಿಮೂರ್ತಿ ಸ್ವರೂಪ ಎಂದು ನಾವು ಕಾಣಬೇಕು. ತ್ರಿಮೂರ್ತಿಗೂ ಅತೀತವಾದ, ಸೃಷ್ಟಿ- ಸ್ಥಿತಿಗಳನ್ನು ಮೀರಿ ನಿಂತ ಗುರುತ್ವ ಶಕ್ತಿ ಗುರು. ಅವರ ನಿರಂತರ ಶಕ್ತಿಸ್ವರೂಪವನ್ನು ನೆನಪಿಸಿಕೊಳ್ಳುವ ದಿನವೇ ಆರಾಧನೆ. ಲೌಕಿಕವಾಗಿ ಮಾಡುವ ಶ್ರಾದ್ಧಕಿಂತ ಆರಾಧನೆ ಭಿನ್ನ. ಗುರುವಿನ ನಿತ್ಯ ಶಾಶ್ವತತ್ವವನ್ನು ಪರಿಭಾವಿಸುವ ದಿನ ಎಂದು ಬಣ್ಣಿಸಿದರು.
ಗುರುವಿನ ಸಂಪರ್ಕವನ್ನು ನಾವು ಸಾಧಿಸಿದಾಗ ಚೈತನ್ಯದ ಪ್ರವಾಹ ನಮ್ಮೆಡೆಗೆ ಹರಿದು ಬರುತ್ತದೆ. ಬದುಕಿಗೆ ಸ್ಫೂರ್ತಿ, ರಕ್ಷೆ, ಉತ್ಸಾಹ ಹರಿದು ಬರುತ್ತದೆ. ಕಣ್ಮರೆಯಾಗಿರುವುದು ಅಮೂಲ್ಯವೇನೋ ನಿಜ; ಆದರೆ ಕಣ್ಣೆದುರು ಇರುವವರಿಗೂ ಮಹತ್ವ ಇದೆ. ಕಣ್ಮರೆಯಾಗಿರುವವರನ್ನು ಹುಡುಕುವ ಪ್ರಯತ್ನದಲ್ಲಿ ಕಣ್ಣಮುಂದಿರುವವರನ್ನೂ ಕಳೆದುಕೊಳ್ಳುವ ಸ್ಥಿತಿ ನಮ್ಮದು ಎಂದು ಹೇಳಿದರು.
ಗುರುವಿನ ಅನುಷ್ಠಾನ, ವಿದ್ಯೆ, ವೇದ, ತತ್ವ, ಶಾಸ್ತ್ರವನ್ನು ಕರೆದು ಗೌರವಿಸುವುದು ಆರಾಧನೆಯ ವಿಶೇಷ. ವೇದಮೂರ್ತಿಗಳು ವಿಶ್ವಮೂರ್ತಿಗಳ ಸ್ವರೂಪ. ಎಲ್ಲ ದೇವತೆಗಳು ಅಲ್ಲಿರುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಪೂಜಿಸಿ ಗೌರವಿಸಲಾಗಿದೆ. ಪಾಂಡಿತ್ಯದ ಪುರಸ್ಕಾರದ ಮೂಲಕ ಗುರುಗಳನ್ನು ನೆನಪಿಸಲಾಗಿದೆ ಎಂದರು. ಶಂಕರಾಚಾರ್ಯರ ಹುಟ್ಟೂರಿನಲ್ಲಿದ್ದುಕೊಂಡು ತಾಯಿ ಸರಸ್ವತಿಯ ಸೇವೆಯನ್ನು ಮಾಡುತ್ತಿರುವವರಿಗೆ ಈ ಬಾರಿಯ ಪಾಂಡಿತ್ಯ ಪುರಸ್ಕಾರ ಸಂದಿರುವುದು ವಿಶೇಷ. ಮೂಕಾಂಬಿಕೆ ವಿದ್ಯೆಗೆ ಬಹಳ ವಿಶೇಷ. ರಾಮಕೃಷ್ಣ ಭಟ್ಟರಿಗೆ ಗೃಹಸ್ಥಾಶ್ರಮವನ್ನೂ ಅನುಗ್ರಹಿಸಿದ ಮೂಕಾಂಬಿಕೆಯ ಕ್ಷೇತ್ರದಲ್ಲಿ ಅವರಿಗೆ ಪುರಸ್ಕಾರವೂ ಸಂದಿದೆ ಎಂದು ನುಡಿದರು.
ವಾರಣಾಸಿ ರಾಮಕೃಷ್ಣ ಭಟ್ ಅವರಿಗೆ ಶ್ರೀ ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಭಟ್ಟರು, ಪುರಸ್ಕಾರ ಆಧುನಿಕ ಕಾಲಘಟ್ಟದಲ್ಲಿ ಸಾಮಾನ್ಯ. ಆದರೆ ಇಂದಿನ ಅನುಗ್ರಹಪೂರ್ವಕ ಪುರಸ್ಕಾರ ಜೀವಮಾನದ ಅವಿಸ್ಮರಣೀಯ ಘಟನೆ. ಶ್ರೀರಾಘವೇಂದ್ರ ಸರಸ್ವತಿಗಳ ವಿದ್ಯಾಗುರುಗಳು ನನಗೂ ನ್ಯಾಯಶಾಸ್ತ್ರ ಬೋಧಿಸಿದವರು. ಅವರ ಹೆಸರಿನ ಪುರಸ್ಕಾರಕ್ಕೆ ಪಾತ್ರನಾಗಿರುವುದು ಹೆಮ್ಮೆಯ ಕ್ಷಣ. ತ್ರಿಮೂರ್ತಿ ಸ್ವರೂಪರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಇದನ್ನು ಅನುಗ್ರಹಿಸುತ್ತಿರುವುದು ಪೂರ್ವಜನ್ಮದ ಪುಣ್ಯ ಎಂದು ಬಣ್ಣಿಸಿದರು.
ವಿಶ್ವೇಶ್ವರ ಅಡಿಗ ದಂಪತಿ ಸಭಾಪೂಜೆ ನೆರವೇರಿಸಿದರು. ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ ಅಡಿಗ ಮಾತನಾಡಿದರು. ರಾಘವೇಶ್ವರ ಶ್ರೀಗಳು ಸಂಕಲ್ಪಿಸಿದ ಪಂಚಕೋಟಿ ಪಂಚಾಕ್ಷರಿ ಜಪದ ರುದ್ರಾಕ್ಷಿ ಮಾಲೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಶೋಭಕೃತ್ ನಾಮ ಸಂವತ್ಸರದ ಧಾರ್ಮಿಕ ಪಂಚಾ0ಗವನ್ನು ಶ್ರೀಗಳು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು. ಮಿತ್ತೂರು ಕೇಶವ ಭಟ್, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾ.ನ.ಶ್ರೀನಿವಾಸ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಉಪಾಧ್ಯಕ್ಷೆ ಶೈಲಜಾ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.