ಶಿರಸಿ: ಭಾರತ್ ಜೋಡೋ ಯಾತ್ರೆಯಲ್ಲಿ ಸತತ 26 ದಿನಗಳ ಕಾಲ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಕಾರವಾರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಖುರೇಶಿಗೆ ಜಿಲ್ಲಾ ಕಾಂಗ್ರೆಸ್ ನಿಂದ ಸನ್ಮಾನಿಸಲಾಯಿತು.
ರಾಷ್ಟ್ರದಲ್ಲಿ ಏಕತೆಗಾಗಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಮಾಡುತ್ತಿದ್ದು ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಪಾದಯಾತ್ರೆ ಸಂಚರಿಸಿತ್ತು. ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಡ್ಲುಪೇಟೆಯಿಂದ ಪಾದಯಾತ್ರೆ ಪ್ರಾರಂಭವಾಗಿ ರಾಯಚೂರಿನಲ್ಲಿ ಮುಕ್ತಾಯವಾಗಿತ್ತು. ಸುಮಾರು 680 ಕಿಲೋ ಮೀಟರ್ ಪಾದಯಾತ್ರೆ ಸಂಚರಿಸಿದ್ದು ಜಿಲ್ಲೆಯಿಂದ 26 ದಿನವೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಏಕೈಕ ಕಾಂಗ್ರೆಸ್ ಕಾರ್ಯಕರ್ತ ಮಹಮ್ಮದ್ ಹನೀಫ್ ಖುರೇಶಿಯಾದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನದ ನಂತರ ಮಾತನಾಡಿದ ಹನೀಫ್ ಖುರೇಶಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಅವರ ಸೂಚನೆ ಮೇರೆಗೆ 26 ದಿನಗಳ ಕಾಲ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಾಯಿತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಹಲವು ವಿಚಾರಗಳನ್ನ ಕಳಿತಿದ್ದೇನೆ. ಪಕ್ಷದ ಮೇಲೆ ಗೌರವ ಸಹ ಹೆಚ್ಚಾಗುವಂತೆ ಮಾಡಿದ್ದು ಪಕ್ಷ ಸಂಘಟನೆಗೆ ಶ್ರಮಮೀರಿ ದುಡಿಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡೋತೋಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೇ ಸುಜಾತಾ ಗಾಂವಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.