ಶಿರಸಿ: ಜೂನ್ ಮತ್ತು ಜುಲೈ 2022ನೇ ಮಾಹೆಗಳ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ನ. 29 ರ ಮಂಗಳವಾರದಂದು ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಕ್ಟೋಬರ್-2022 ನೇ ಮಾಹೆಯ ಪ್ರೋತ್ಸಾಹ ಧನದ ಮಾಹಿತಿಯನ್ನು ನಮ್ಮಿಂದ ಕ್ಷೀರ ಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಜಿಲ್ಲೆಯಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ನವೆಂಬರ್-2022 ನೇ ಮಾಹೆಯ ಪ್ರೋತ್ಸಾಹ ಧನದ ಮಾಹಿತಿಯನ್ನು ಪಡೆದು ಕ್ಷೀರ ಸಿರಿ ತಂತ್ರಾಶದಲ್ಲಿ ಅಳವಡಿಸಲಾಗುತ್ತಿದೆ ಎಂದರು. ಅಗಸ್ಟ್, ಸಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳ ರೂ. 5 ಪ್ರೋತ್ಸಾಹ ಧನವು ಕೂಡ ಶೀಘ್ರದಲ್ಲೇ ಹಾಲು ಉತ್ಪಾದಕರ ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಹಾಗೂ ಪ್ರೋತ್ಸಾಹಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.