ದಾಂಡೇಲಿ: ಮೇಯಲು ಬಿಟ್ಟಿದ್ದ ಎಮ್ಮೆಗಳನ್ನು ಕರೆದೊಯ್ಯಲು ಬಂದ ವ್ಯಕ್ತಿಯ ಮೇಲೆ ಕರಡಿಗಳೆರಡು ದಾಳಿ ನಡೆಸಿ, ಗಂಭೀರ ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ತಾಲೂಕಿನ ಬರ್ಚಿಯಲ್ಲಿ ನಡೆದಿದೆ.
ಬರ್ಚಿ ಸಮೀಪದ ವಿಟ್ನಾಳ ಗ್ರಾಮದ ನಿವಾಸಿಯಾಗಿರುವ 58 ವರ್ಷದ ಸಾವು ಜಾನು ಘಾರೆ ಎಂಬವರೆ ಕರಡಿ ದಾಳಿಗೊಳಗಾಗಿ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಮೇಯಲು ಬಿಟ್ಟಿದ್ದ ಎಮ್ಮೆಗಳನ್ನು ಕರೆದೊಯ್ಯಲು ಬಂದ0ತಹ ಸಂದರ್ಭದಲ್ಲಿ ಏಕಕಾಲದಲ್ಲಿ ಎರಡು ಕರಡಿಗಳು ದಾಳಿ ಮಾಡಿವೆ. ಕರಡಿಗಳು ಇವರನ್ನು ಕೆಡವಿ ನೆಲಕ್ಕುರುಳಿಸಿ ದಾಳಿ ಮಾಡುತ್ತಿದ್ದಂತೆಯೆ ಎಮ್ಮೆಗಳೆಲ್ಲ ಒಟ್ಟು ಸೇರಿ ಕರಡಿಗಳನ್ನು ಅಲ್ಲಿಂದ ಓಡಿಸಿವೆ. ಅದೃಷ್ಟವಶಾತ್ ಸಾವು ಜಾನು ಘಾರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಭೀರ ಗಾಯಗೊಂಡ ಸಾವು ಜಾನು ಘಾರೆೆಯವರು ಎದ್ದು ಬಿದ್ದು ಬರ್ಚಿ ವಲಯಾರಣ್ಯಾಧಿಕಾರಿಯವರ ಕಚೇರಿಗೆ ಬಂದಿದ್ದಾರೆ. ಕೂಡಲೆ ವಲಯಾರಣ್ಯಾಧಿಕಾರಿ ಅಶೋಕ ಶಿಳ್ನೆನ್ನವರ ಅವರು ತಮ್ಮ ಇಲಾಖೆಯ ವಾಹನದ ಮೂಲಕ ಸಾವು ಜಾನು ಘಾರೆಯವರನ್ನು ತಮ್ಮ ಸಿಬ್ಬಂದಿಗಳೊ0ದಿಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಸೇರಿದಂತೆ ಸಿಬ್ಬಂದಿಗಳು ತಡವರಿಯದೇ ಚಿಕಿತ್ಸೆ ನೀಡಿ, ಗಾಯಕ್ಕೆ ಔಷಧಿಯನ್ನು ಹಚ್ಚಿ ಬ್ಯಾಂಡೇಜ್ ಕಟ್ಟಿ, ಆನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.