Slide
Slide
Slide
previous arrow
next arrow

ಘನತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ ಸ್ಥಳ ನಿಗದಿಗೆ ಸಭೆ; ವ್ಯಾಪಕ ಚರ್ಚೆ

300x250 AD

ಕುಮಟಾ: ಪುರಸಭೆಯ ಘನತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ ಸ್ಥಳ ನಿಗದಿ ಮಾಡುವ ಸಂಬಂಧ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಘನತ್ಯಾಜ್ಯ ಘಟಕದ ಸ್ಥಳ ನಿಯುಕ್ತಿಗೊಳಿಸುವ ಕುರಿತು ಪುರಸಭೆ ವ್ಯಾಪ್ತಿಯ ಚಿತ್ರಗಿ ಸರ್ವೇ ನಂ.94ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಪ್ರಸ್ತಾವನೆಯನ್ನು ಮುಖ್ಯಾಧಿಕಾರಿ ಅಜಯ ಭಂಡಾರ್ಕರ್ ಮಂಡಿಸಿದರು.
ಇದಕ್ಕೆ ಸದಸ್ಯರಾದ ರಾಜೇಶ ಪೈ, ಸಂತೋಷ ನಾಯ್ಕ, ವಿರೋಧ ವ್ಯಕ್ತ ಪಡಿಸಿ ಸೋಕನ ಮಕ್ಕಿಯಲ್ಲಿ ಈಗಾಗಲೇ ಗುರುತಿಸಿರುವ ಸ್ಥಳವನ್ನು ಘನತ್ಯಾಜ್ಯ ಘಟಕಕ್ಕೆ ಆಯ್ಕೆ ಮಾಡಬೇಕೆಂದು ಸೂಚಿಸಿದರು. ಈ ಮಧ್ಯೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ತಾಲೂಕಿನಾದ್ಯಂತ ಮೂರೂರು, ಮಿರ್ಜಾನ, ನಾಗೂರ, ಖಂಡಗಾರ, ದೇವಗಿರಿ ಹೀಗೆ 5 ಕಡೆ ಘಟಕ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಲಾಗಿತ್ತು. ಆದರೆ ಜನರು ಕಾನೂನು ಹೋರಾಟ ನಡೆಸಿ ಪ್ರಸ್ತಾವನೆಯನ್ನು ರದ್ದುಪಡಿಸಲಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ಪುರಸಭೆಗೆ ಘನತ್ಯಾಜ್ಯ ಘಟಕ ಇಲ್ಲದಿರುವುದನ್ನು ಬೆಂಗಳೂರಿನ ಪರಿಶೀಲನಾ ಸಮಿತಿ ಪುರಸಭೆಗೆ ಛೀಮಾರಿ ಹಾಕಿದೆ ಎಂದು ಮುಖ್ಯಾಧಿಕಾರಿ ಬೇಸರ ವ್ಯಕ್ತ ಪಡಿಸಿದರು.
ಅಲ್ಲದೆ ಎನ್‌ಜಿಟಿ ಪುರಸಭೆಗೆ 1.20 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದನ್ನು ತಕ್ಷಣ ಭರಪಾಯಿ ಮಾಡಬೇಕು. ಇಲ್ಲವಾದರೆ ಕಾನೂನಿನ ಕುಣಿಕೆ ನಮ್ಮನ್ನು ಬಿಗಿದುಕೊಳ್ಳಲಿದೆ ಎಂದು ಭಂಡರ‍್ಕರ ಎಚ್ಚರಿಸಿದರು. ಈ ರೀತಿಯ ದಂಡ ಇತರ ಪುರಸಭೆಗೂ ವಿಧಿಸಿರುವದರಿಂದ ನಾವು ವಿಚಲಿತಗೊಳ್ಳುವ ಅಗತ್ಯವಿಲ್ಲ ಎಂದು ಸಂತೋಷ ನಾಯ್ಕ ಸಮಾಧಾನ ಪಡಿಸಿದರು.
ಪುರಸಭೆಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವದರಿಂದ ಅದನ್ನು ಸರಿಪಡಿಸಲು ಯಾವ ಕ್ರಮ ಕೈಗೊಳ್ಳುತ್ತಿರಿ ಎಂದು ಸಂತೋಷ ನಾಯ್ಕ ಪ್ರಶ್ನಿಸಿದರು. ನೀರಿನ ತೆರಿಗೆಯಿಂದ ಪ್ರತಿ ದಿನ 50000 ರೂ. ಪುರಸಭೆ ಇತರ ತೆರಿಗೆಗಳಿಂದ 50000 ರೂ. ಆರೋಗ್ಯ ತೆರಿಗೆಯಿಂದ 20000 ರೂ. ಪ್ರತಿನಿತ್ಯ ಕಡ್ಡಾಯವಾಗಿ ಸಂಗ್ರಹಿಸಿ ವೆಚ್ಚವನ್ನು ಆದಾಯಕ್ಕೆ ಸರಿದೂಗಿಸಲಾಗುವದೆಂದು ಮುಖ್ಯಾಧಿಕಾರಿ ಉತ್ತರಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಮಾಡಿದ ವೆಚ್ಚದ ಕುರಿತು ಲೆಕ್ಕ ನೀಡಬೇಕೆಂದು ಸಂತೋಷ ನಾಯ್ಕ ಒತ್ತಾಯಿಸಿದರು. ತಾತ್ಕಾಲಿಕ ವಿನ್ಯಾಸ ನಕ್ಷೆ ಅನುಮೋದನೆಗಾಗಿ ಜಿಲ್ಲಾ ತಾಂತ್ರಿಕ ವಿಭಾಗಗಕ್ಕೆ 9 ಕಡತಗಳನ್ನು ಕಳುಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ಸದಸ್ಯರಾದ ಎಂ.ಟಿ.ನಾಯ್ಕ, ಮಹೇಶ ನಾಯ್ಕ ವನ್ನಳ್ಳಿ ಕೂಡ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯ ಮಂಡಿಸಿದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮತಿ ಭಟ್, ಚೇರಮೆನ್ ಶುಶೀಲಾ ಗೋವಿಂದ ನಾಯ್ಕ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top