ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲ ವಿದ್ಯಾರ್ಥಿಗಳಿಗಾಗಿ ಪ್ರತಿ ಪಾಡ್ಯಮಿಯಂದು ನಡೆಯುವ ‘ಪ್ರತಿಪದಾನಂದ’ ಸರಣಿ ಸಂಗೀತ ಕಾರ್ಯಕ್ರಮದ ಅಂಗವಾಗಿ ನ.24ರಂದು ಕರ್ನಾಟಕ ಸಂಗೀತ ಕಾರ್ಯಾಗಾರ ಮತ್ತು ಸಂಗೀತ ಕಛೇರಿ ಆಯೋಜಿಸಲಾಗಿದೆ.
‘ಪ್ರತಿಯೊಂದು ಪ್ರತಿಪದೆ ವಿದ್ಯಾಶಿಶುಗಳಿಗೆ ಆನಂದ ಸುಧೆ’ ಎಂಬ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪರಿಕಲ್ಪನೆಯಡಿ ಆಯೋಜನೆಗೊಳ್ಳುತ್ತಿರುವ ಈ ಸರಣಿ ಕಾರ್ಯಕ್ರಮದಲ್ಲಿ ಈ ಬಾರಿ ವಿಶ್ವವಿಖ್ಯಾತ ತಬಲಾ ಕಲಾವಿದ ಜಯಚಂದ್ರ ರಾವ್, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಕಾಂಚನ ಸಹೋದರಿಯರು ಪಾಲ್ಗೊಳ್ಳುತ್ತಿದ್ದಾರೆ.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶ್ವವಿದ್ಯಾ ಸಭಾಭವನದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4ರವರೆಗೆ ನಡೆಯುವ ಈ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಹಿಸುವರು. ವಿದುಷಿ ಶ್ರೀರಂಜನಿ ಮತ್ತು ವಿದುಷಿ ಶ್ರುತಿರಂಜನಿ ಗಾನಸುಧೆ ಹರಿಸುವರು. ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ, ಮೃದಂಗದಲ್ಲಿ ವಿದ್ವಾನ್ ಕೆ.ಯು.ಜಯಚಂದ್ರ ರಾವ್, ವಿದ್ವಾನ್ ಭಾರ್ಗವ ಹಾಲಂಬಿ, ತಬಲಾದಲ್ಲಿ ವಿದ್ವಾನ್ ಕಾರ್ತಿಕ್ ಕೃಷ್ಣ ಸಾಥ್ ನೀಡುವರು ಎಂದು ಸಂಗೀತ ವಿಭಾಗದ ಮುಖ್ಯಸ್ಥ ರಘುನಂದನ್ ಬೇರ್ಕಡವು ಪ್ರಕಟಣೆಯಲ್ಲಿ ಹೇಳಿದ್ದಾರೆ. ಸಂಗೀತಾಸಕ್ತರಿಗೆ ಮುಕ್ತ ಪ್ರವೇಶಾವಕಾಶ ಇರುತ್ತದೆ.