ಕುಮಟಾ: ಇಂದಿನ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬ್ಯಾಂಕ್‌ನ ಅವಶ್ಯಕತೆ ಇದೆ. ಇದರಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾದುದು. ಹಳ್ಳಿಯಲ್ಲಿರುವ ಬ್ಯಾಂಕ್ ಗ್ರಾಹಕರಿಗೆ ಸರಿಯಾದ ಸೇವೆ ನೀಡಿದರೆ ವೃತ್ತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಂಜೀವಿನಿ ಅಭಿಯಾನ ಘಟಕದ ತಾಂತ್ರಿಕ ಸಂಯೋಜಕ ಸಂತೋಷ ಪಾಟೀಲ್ ಹೇಳಿದರು.
ಜಿಲ್ಲಾ ಪಂಚಾಯತ್ ಮತ್ತು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 6 ದಿನಗಳ ಬ್ಯಾಂಕ್ ಮಿತ್ರ/ ಬ್ಯಾಂಕ್ ಸಖಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ರವಿ ಜಿ.ಕೆ., ಬ್ಯಾಂಕ್‌ನ ಸೇವೆಯನ್ನು ಪ್ರತಿಯೊಬ್ಬರಿಗೂ ತಲುಪುವ ದೃಷ್ಟಿಯಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯತಿಗೆ ಸ್ವ- ಸಹಾಯ ಸಂಘದಲ್ಲಿರುವ ಒಂದು ಮಹಿಳೆಯನ್ನು ಬ್ಯಾಂಕ್ ಸಖಿಯನ್ನಾಗಿ ಆಯ್ಕೆಮಾಡಿ ಆರು ದಿನ ತರಬೇತಿಯನ್ನು ನೀಡಿದ್ದೇವೆ. ಸರ್ಕಾರದ ಯೋಜನೆ ಸರಿಯಾಗಿ ಉಪಯೋಗವಾಗಬೇಕೆಂದು ತಿಳಿಸಿದರು.
ಆರಂಭದಲ್ಲಿ ಶಿಬಿರಾರ್ಥಿ ಭವಾನಿ ನಿರೂಪಣೆ ಮಾಡಿದರು. ಶೋಭಾ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಸುಮಿತ್ರಾ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕ ಗೌರೀಶ ನಾಯ್ಕ ಮತ್ತು ಸಂಪನ್ಮೂಲ ವ್ಯಕ್ತಿ ಸಾವಿತ್ರಿ ಉಪಸ್ಥಿತರಿದ್ದರು.