ಅಂಕೋಲಾ: ವಿಶ್ವ ಮಧುಮೇಹ ಜಾಗೃತಿ ದಿನಾಚರಣೆಯ ಪ್ರಯುಕ್ತ ನಗರದ ‘ಕಾಳೆ-ಕಾಂಪ್ಲೆಕ್ಸ್’ ಸಭಾಭವನದಲ್ಲಿ ರಕ್ತ ತಪಾಸಣೆ ಮತ್ತು ಮಧುಮೇಹ ಜಾಗೃತಿ ಕುರಿತು ಸಮಾಲೋಚನಾ ಕಾರ್ಯಕ್ರಮ ಸಿಟಿ ಲಯನ್ಸ್ ಹಮ್ಮಿಕೊಂಡಿತ್ತು.
ನಗರದ ಜನಸ್ನೇಹಿ ವೈದ್ಯ ಡಾ.ಎಸ್.ಎಂ.ಶೆಟ್ಟಿ ಮಧುಮೇಹ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ನಾಳೆಯ ಆರೋಗ್ಯಕರ ಜೀವನಕ್ಕಾಗಿ ಇಂದಿನ ಆಹಾರ- ವಿಹಾರ ವಿಚಾರಗಳಲ್ಲಿ ವಹಿಸಬೇಕಾದ ಜಾಗೃತಿ ಮೂಡಿಸಿದರು. ಕಣ್ಣು, ಹೃದಯ, ಕಿಡ್ನಿ, ಕಾಲು ನರಗಳಿಗೆ ಆಗುವ ಅಪಾಯದ ನಿಯಂತ್ರಣಕ್ಕೆ ವಹಿಸಬೇಕಾದ ಜಾಗರೂಕತೆ ವ್ಯಾಯಾಮ, ಆಹಾರ (ತರಕಾರಿ, ಹಣ್ಣು ಮಾಂಸಾಹಾರ) ಕುರಿತು ತಿಳುವಳಿಕೆ ನೀಡಿ, ಮಧುಮೇಹ ಬಾರದಂತೆ ಪ್ರಾರಂಭಿಕ ಸುವರ್ಣಾವಕಾಶದಲ್ಲಿ ಎಚ್ಚರ ವಹಿಸಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಿಟಿ ಅಧ್ಯಕ್ಷೆ ಜಯಶ್ರೀ ಪಿ.ಶೆಟ್ಟಿ ಸರ್ವರನ್ನು ಸ್ವಾಗತಿಸಿ, ಆರೋಗ್ಯ ಜೀವನ ಶೈಲಿ ಸದೃಢ ಸಮಾಜ ಆರೋಗ್ಯಕರ ಸಮಾಜ ನಮ್ಮದಾಗಲಿ ಎಂದು ಆಶಿಸಿದರು. ‘ಸಮಾಲೋಚನಾ ಮತ್ತು ರಕ್ತ ತಪಾಸಣಾ’ ಸಭೆಯಲ್ಲಿ ಅರ್ಬನ್ ಬ್ಯಾಂಕ್ ನಿರ್ದೇಶಕ ಗೋಪಾಲಕೃಷ್ಣ ನಾಯಕ, ಶಿಕ್ಷಣ ಇಲಾಖೆಯ ಬೀರಮ್ಮ ನಾಯಕ, ಮೋಹನ ಶೆಟ್ಟಿ, ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸುರೇಶ ಡಿ.ನಾಯ್ಕ, ಕೃಷ್ಣಾನಂದ ವ್ಹಿ.ಶೆಟ್ಟಿ, ಡಾ.ಶಾಂತಾರಾಮ ಶಿರೋಡ್ಕರ, ಪ್ರಶಾಂತ ಶೆಟ್ಟಿ, ವಿದ್ಯಾ ಎಸ್.ಶೆಟ್ಟಿ, ಶ್ರವಣ ನಾಯಕ, ರಾಜು ನಾಯಕ ಮತ್ತು ಆಸಕ್ತ ನಾಗರೀಕರು ಭಾಗವಹಿಸಿ ಮಧುಮೇಹ ಜಾಗೃತಿಯ ಪ್ರಯೋಜನ ಪಡೆದರು. ನಾರಾಯಣ ಎಚ್.ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಸ್.ಎಂ.ಶೆಟ್ಟಿ ದಂಪತಿ ಭಾಗವಹಿಸಿದ ಎಲ್ಲರಿಗೂ ರಕ್ತ ತಪಾಸಣೆ ನೆರವೇರಿಸಿದ ತಂತ್ರಜ್ಞರ ಉಪಕಾರ ಸ್ಮರಿಸಿದರು.