ಕುಮಟಾ: ಮಣಿಪಾಲ ಆರೋಗ್ಯ ಕಾರ್ಡ್ನ ನೋಂದಣಿಯನ್ನು ನ.30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕಸ್ತೂರ ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ರಿಯಾಯಿತಿ ದರದಲ್ಲಿ ದೊರೆಯಲಿ ಎಂಬ ಸದುದ್ದೇಶದಿಂದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಆರಂಭಿಸಲಾಗಿದೆ. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯ ವಾಕ್ಯದಡಿ ಈ ಕಾರ್ಡ್ನಲ್ಲಿ ಜಾರಿಗೊಳಿಸಿದ್ದೇವೆ. ಆಸ್ಪತ್ರೆಯ ಎಲ್ಲ ಆರೋಗ್ಯ ಸೇವೆಗಳ ಮೇಲೂ ರಿಯಾಯಿತಿ ನೀಡುತ್ತದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಕಾರ್ಡ್ನ ಸದಸ್ಯತ್ವ ಪಡೆಯಬಹುದು. ಕಾರ್ಡ್ಗಾಗಿ ವಿನಿಯೋಗಿಸಿದ ಹಣವನ್ನು ಎರಡು ಅಥವಾ ಮೂರು ಬಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯ ಪಡೆಯುವ ಮೂಲಕ ವಾಪಸ್ ಪಡೆಯಬಹುದು ಎಂದರು.
ಒಂದು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 300 ರೂ. ಸಂಗಾತಿ ಮತ್ತು ಮಕ್ಕಳನ್ನು ಸೇರ್ಪಡೆ ಮಾಡಿದರೆ 600 ರೂ. ಮತ್ತು ಕುಟುಂಬ ಪ್ಲಸ್ ಯೋಜನೆಗೆ 750 ರೂ. ಆಗಿದೆ. ಎರಡು ವರ್ಷದ ಯೋಜನೆಗೆ ಕ್ರಮವಾಗಿ 500 ರೂ., 800 ರೂ. ಮತ್ತು 950 ರೂ. ನಿಗದಿಪಡಿಸಲಾಗಿದೆ. ತಜ್ಞ ವೈದ್ಯರ ಸಮಾಲೋಚನೆಯಲ್ಲಿ ಶೇ.50ರಷ್ಟು ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗೆ ಶೇ.30,ಸ್ಕ್ಯಾನಿಂಗ್ ಗೆ ಶೇ.20, ಔಷಧಗಳ ಮೇಲೆ ಶೇ.12 ರಿಯಾಯಿತಿ ನೀಡಲಾಗಿದೆ. ಈ ಕಾರ್ಡ್ ಮೂಲಕ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ ಗೋವಾ, ಮಂಗಳೂರು ಮತ್ತು ಮಣಿಪಾಲನಲ್ಲಿರುವ ದಂತ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೌಲಭ್ಯ ಪಡೆಯಬಹುದು. ಕಾರ್ಡ್ ನೋಂದಾಯಿಸಿದ ಮೊಬೈಲ್ ನಂಬರ್ನಿಂದ ಈ ನಂಬರ್ 8867579797 ಮಿಸ್ ಕಾಲ್ ನೀಡುವ ಮೂಲಕ ನೋಂದಣಿಯಾದ ಕಾರ್ಡ್ನ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಅರುಣ ಗುನಗಾ ಮೊ. 9448012077, 8151927377 ಅಥವಾ ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿಯ ಎಲ್ಲ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕ ಕೆ.ಸಚಿನ್ ಕಾರಂತ, ವ್ಯವಸ್ಥಾಪಕ ಮೋಹನ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಕೃಷ್ಣಪ್ರಸಾದ, ಮಾರುಕಟ್ಟೆ ವಿಭಾಗದ ಪ್ರತಿನಿಧಿ ಚೇತನ್ ಇದ್ದರು.