ಶಿರಸಿ: ಮಕ್ಕಳಲ್ಲಿನ ಶೈಕ್ಷಣಿಕ ಸಾಮರ್ಥ್ಯ ಗುರುತಿಸುವ ಸಲುವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ವಿಶಿಷ್ಟ ಪ್ರತಿಭಾನ್ವೇಷಣೆ ಪರೀಕ್ಷೆ ಹಮ್ಮಿಕೊಂಡಿದೆ. ತಾಲೂಕಿನಲ್ಲಿ ಎಂಟನೇ ವರ್ಗದ ಮಕ್ಕಳು ಈ ಪರೀಕ್ಷೆ ಎದುರಿಸಲಿದ್ದಾರೆ.
ಮಕ್ಕಳನ್ನು ಭವಿಷ್ಯದಲ್ಲಿ ಅವರ ಶೈಕ್ಷಣಿಕ ಕೌಶಲ್ಯ ಗುರುತಿಸಿ ಅಂಥ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮುಗಿಯುವದರೊಳಗೆ ಹಲವು ಹಂತದಲ್ಲಿ ವಿಶೇಷ ತರಬೇತಿ ನೀಡುವುದು ಇಲಾಖೆಯ ಆಶಯವಾಗಿದೆ. ಎಸ್ಸೆಸ್ಸೆಲ್ಸಿಯ ವೇಳೆ ನಡೆಯುವ ಎನ್‌ಟಿಎಸ್‌ಸಿ ಪರೀಕ್ಷೆಯಲ್ಲಿ ಅಧಿಕ ಮಕ್ಕಳು ತೇರ್ಗಡೆಗೊಂಡು ಅದರ ಲಾಭ ಪಡೆಯಲು ಈ ಪರೀಕ್ಷೆ ನೆರವಾಗಲಿದೆ ಎಂಬ ವಿಶ್ವಾಸ ಇಲಾಖೆಯದ್ದಾಗಿದೆ.
ಮಾದರಿ ಪರೀಕ್ಷೆ: ತಾಲೂಕಿನ ಮಕ್ಕಳು ಭವಿಷ್ಯದಲ್ಲಿ ಐಎಎಸ್, ಐಪಿಎಸ್‌ನಂತಹ ಉನ್ನತ ಶಿಕ್ಷಣ, ಸಾಧನೆ ಮಾಡಲು ನೆರವಾಗುವ ನಿಟ್ಟಿನಲ್ಲಿ ಈ ಪರೀಕ್ಷೆ ಮೊದಲ ಮೆಟ್ಟಲಾಗಲಿದೆ. ಈಗಾಗಲೇ ಎಂಟನೇ ವರ್ಗದ ಇರುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಮಾದರಿಯಲ್ಲಿ ಇದೂ ನಡೆಯಲಿದೆ. ಆದರೆ, ಅಲ್ಲಿ ವಿದ್ಯಾರ್ಥಿ ವೇತನ ಸಿಕ್ಕರೂ ಮಕ್ಕಳ ಸಾಮರ್ಥ್ಯ ಅನಾವರಣದ ಜರಡಿ ಸಿಗುತ್ತಿರಲಿಲ್ಲ. ಆದರೆ ಇಲ್ಲಿ ಪ್ರತ್ಯೇಕವಾಗಿ ನಡೆಸುವುದರಿಂದ ಪ್ರತಿ ಶಾಲೆಯ ಪ್ರತಿಭಾವಂತ ಮಕ್ಕಳ ವಿವರವಾದ ಕನ್ನಡಿ ಸಿಗಲಿದೆ.
ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಆಂಗ್ಲ, ಕನ್ನಡ ಭಾಷೆಗಳ ಜೊತೆ ಸಾಮಾನ್ಯ ಜ್ಞಾನದ ಪರೀಕ್ಷೆ ನಡೆಯಲಿದೆ. ಒಂದು ಶಾಲೆಯಲ್ಲಿ ಎಷ್ಟ್ಟು ಮಂದಿ ಪ್ರತಿಭಾವಂತರಿದ್ದಾರೆ, ಅವರಿಗೆ ನಾವು ನೀಡಬೇಕಾದ ತರಬೇತಿ ಏನು ಎಂಬುದು ಅಂತಿಮಗೊಳಿಸಲು ಇದು ನೆರವಾಗಲಿದೆ. ಇಲಾಖೆಯ ಕ್ರಿಯಾಶೀಲತೆ ಯೋಜನೆ ಮೂಲಕ ಶೈಕ್ಷಣಿಕ ಗುಣಮಟ್ಟಕ್ಕೆ ಪ್ರೌಢಶಾಲಾ ಹಂತದಲ್ಲಿ ಒಂದು ವಿಶೇಷ ಮೆಟ್ಟಿಲು ಕಟ್ಟಲು ಮುಂದಾಗಿದೆ.
ಕೋಟ್…
ಇದೊಂದು ಮಾದರಿ ಪ್ರಯೋಗವಾಗಿ ಒಳ್ಳೆ ಆಶಯದಲ್ಲಿ ನಡೆಸುತ್ತಿದ್ದೇವೆ. ತಮ್ಮ ಶಾಲೆಯಲ್ಲಿ ಎಷ್ಟು ಮಂದಿ ಪ್ರತಿಭಾವಂತರು ಇದ್ದಾರೆ ಎಂದು ಈ ಪರೀಕ್ಷೆ ತಿಳಿಸಲಿದೆ.
• ಎಂ.ಎಸ್.ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ