ಶಿರಸಿ: ಸಾಹಿತ್ಯದ ಓದುವಿಕೆಯೇ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಹಳೆಗನ್ನಡದ ಓದು ಕ್ಲಿಷ್ಟ ಎನ್ನುವ ಭಾವನೆ ಓದುಗರಲ್ಲಿ ಬಂದಿದೆ. ಕೊಂಚ ಸಂಸ್ಕೃತದ ಜ್ಞಾನ ಹಾಗೂ ಕನ್ನಡ ಪದಕೋಶ ಜೊತೆಗಿದ್ದರೆ ಹಳೆಗನ್ನಡದ ಓದು ಸುಲಭ ಎಂದು ಖ್ಯಾತ ಲೇಖಕ ಹಾಗೂ ಉಪನ್ಯಾಸಕ ಡಾ. ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯ ಪಟ್ಟರು.
ಅವರು ನ.18 ರಂದು ಹುಲೇಕಲ್ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿರಸಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಹಳೇಗನ್ನಡದ ಓದು ಕಾರ್ಯಕ್ರಮದಲ್ಲಿ ಚಕ್ರವರ್ತಿ ರನ್ನನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಕೆ.ಎನ್. ಹೊಸ್ಮನಿ ಮಾತನಾಡಿ ಹೈಸ್ಕೂಲ್ – ಕಾಲೇಜ್ ವಿದ್ಯಾರ್ಥಿಗಳ ಹಳೆಗನ್ನಡದ ಓದಿನ ಮುಖಾಂತರ ಪಂಪ, ರನ್ನ, ಜನ್ನ ನಂತಹ ಹತ್ತಾರು ಕವಿಗಳ ಕಾವ್ಯ ಸಾಹಿತ್ಯ ಅರಿಯಬೇಕು ಎಂದರು.
ಕನ್ನಡ ಕಾರ್ತಿಕ – ಅನುದಿನ- ಅನನುಸ್ಪಂದನ ಕಾರ್ಯಕ್ರಮದಡಿ ಹಳೆಗನ್ನಡದ ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಮಾತನಾಡಿ ವಿದ್ಯಾರ್ಥಿಗಳಿಗೆ ಹಳೆಗನ್ನಡದ ಓದಿನ ರುಚಿ-ಕಾವ್ಯ,ಸ್ವಾದ ಅರಿವಿಗಾಗಿ ಈ ಕಾರ್ಯಕ್ರಮ. ವಿದ್ಯಾರ್ಥಿ ಜೀವನದಲ್ಲಿ ಓದು ಮುಂದೆ ದಾರಿದೀಪವಾಗಲಿದೆ ಎಂದರು.
ವೇದಿಕೆಯಲ್ಲಿ ಶ್ರೀದೇವಿ ವಿದ್ಯಾ ಸಂಸ್ಥೆ ಹುಲೇಕಲ್ ಕಾರ್ಯಾಧ್ಯಕ್ಷ ಎಂ.ಎನ್.ಹೆಗಡೆ, ಪ್ರಾಚಾರ್ಯ ಡಿ.ಆರ್.ಹೆಗಡೆ, ಶಿರಸಿ ಕಸಾಪ ಕಾರ್ಯಕಾರಿಣಿ ಸದಸ್ಯೆ ವಿಮಲಾ ಭಾಗ್ವತ್ ಉಪಸ್ಥಿತರಿದ್ದರು. ಶಿಕ್ಷಕ ಮೋಹನ್ ಭರಣಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.