ತುಮಕೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರವೇ 24×7 ಸಹಾಯವಾಣಿ ಆರಂಭವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ತೀಚೆಗೆ ಸಂಬಂಧಿಸಿದ ತಾಯಿ-ಮಗು ಸಾವಿನ ಪ್ರಕರಣ ಆಘಾತ ತರುವಂತದ್ದು. ಇಂತಹ ಘಟನೆ ಮರುಕಳಿಸದಂತೆ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ 24×7 ಸಹಾಯವಾಣಿ ತೆರೆಯಲು ನಿರ್ಧರಿಸಲಾಗುವುದು ಎಂದಿದ್ದಾರೆ.
ಇದಕ್ಕೂ ಮುನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಆರೋಗ್ಯ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸಹಾಯವಾಣಿಗೆ ಸಾಮಾಜಿಕ ಭದ್ರತೆ ಇರುವಂತಹ 4 ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ದಿನದ 24 ಗಂಟೆ ಈ ಸಹಾಯವಾಣಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಹಗಲು ಪಾಳಿಯಲ್ಲಿ ಇಬ್ಬರು ಮತ್ತು ರಾತ್ರಿ ಪಾಳಿಯಲ್ಲಿ ಇಬ್ಬರು ಕೆಲಸ ನಿರ್ವಹಿಸುವಂತೆ ಮಾಡಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.