Slide
Slide
Slide
previous arrow
next arrow

ಜೀವನದಲ್ಲಿ ಸಾಧನೆಗೈಯಲು ಹಠವಿರಬೇಕು:ಡಾ. ನಿರಂಜನ್ ವಾನಳ್ಳಿ

300x250 AD

ಶಿರಸಿ:ಅರುಣಿಮಾ ಸಿನ್ಹಾ ಇವಳ ಕಥೆಯನ್ನು ಬಿತ್ತರಿಸಿ ವಿದ್ಯಾರ್ಥಿಗಳ ಕಣ್ಣಂಚನ್ನು ಒದ್ದೆ ಮಾಡಿ ಬದುಕಿನಲ್ಲಿ ಏನಿಲ್ಲವಾದರೂ ಹಠವೊಂದಿದ್ದರೆ ನಾವು ಜೀವನದಲ್ಲಿ ಸಾಧನೆಗೈಯಲು ಸಾಧ್ಯವಿದೆ ಎಂಬುದನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ವಾನಳ್ಳಿ ನ.17, ಗುರುವಾರದಂದು ಶಿರಸಿ ಲಯನ್ಸ್ ಕ್ಲಬ್, ಶಿರಸಿ ಲಿಯೋ ಕ್ಲಬ್, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಲಯನ್ಸ್ ಸಭಾಭವನದಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾರ್ಮಿಕವಾಗಿ ಮಾತನಾಡಿದರು.

ಡಾಕ್ಟರ್ ನಿರಂಜನ್ ವಾನಳ್ಳಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ಇಲ್ಲಸಲ್ಲದ ವಿಷಯಗಳ ಕುರಿತಾಗಿ ಪಾಲಕರೊಂದಿಗೆ ಹಠ ಮಾಡದೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ಕುರಿತಾಗಿ ಹಠ ಹಿಡಿದು, ಮುನ್ನಡೆದು ಸಾಧನೆ ಮಾಡಬೇಕೆಂದು ತಿಳಿಸಿಕೊಟ್ಟರು. ಕಥೆಯ ಮುಖಾಂತರ ಜೀವನದಲ್ಲಿ ಪ್ರಾಮಾಣಿಕತೆಯ ನಡೆಯೆಂಬುದು ನಿಧಾನವಾಗಿಯಾದರೂ ಬದುಕಿನಲ್ಲಿ ಯಶಸ್ಸಿನ ಅಂಚನ್ನು ತಲುಪಿಸುವುದೆಂಬ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಧನಾತ್ಮಕ ಚಿಂತನೆಯಿಂದ ಓದು ಮುಂದುವರೆಸಿ, ಪ್ರಾಮಾಣಿಕತೆ, ಶ್ರದ್ಧೆಯಿಂದ ಮುಂದುವರೆಯಿರಿ ಇಂದಲ್ಲ ನಾಳೆ ಗೆಲುವು ನಿಮ್ಮದೇ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕುಮಾರಿ ಧಾತ್ರಿಯ ವಾನಳ್ಳಿಯವರ ಸಾವಿರಾರು ಬರಹಗಳಿಗೆ ಪ್ರೇರಣೆ ಏನು ಎಂಬ ಪ್ರಶ್ನೆಗೆ ಮಲೆನಾಡ ಪ್ರಕೃತಿ ಸೌಂದರ್ಯ, ನಿತ್ಯ ಜೀವನದ ಅನುಭವಗಳೇ ತಮ್ಮ ಬರಹಗಳಿಗೆ ಪ್ರೇರಣೆ ಎಂಬುದಾಗಿ ಉತ್ತರಿಸಿ, ಇಂದಿನ ಯುವ ಪೀಳಿಗೆ ಮೊಬೈಲ್ ಬಿಟ್ಟು ವಾಸ್ತವಿಕತೆಯ ಬದುಕಿನ ನೈಜ ಚಿತ್ರಣಗಳನ್ನ ವೀಕ್ಷಿಸಿ, ಒಡನಾಡಿ ತಮ್ಮ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಅಣಿಯಾಗಬೇಕೆಂದು ತಿಳಿ ಹೇಳಿದರು. ವಿದ್ಯಾರ್ಥಿಗಳಲ್ಲಿ ಓದುವಿಕೆ, ಕೇಳುವಿಕೆ, ನೋಡುವಿಕೆ, ಬರೆಯುವಿಕೆ ಇವುಗಳು ಯಾಂತ್ರಿಕವಾಗದೆ ಅದರಲ್ಲಿ ಗ್ರಹಿಕೆ ಇದ್ದಾಗ ವಿಷಯದ ಅಭಿವ್ಯಕ್ತಿಯೂ ಉತ್ತಮವಾಗಿ ಮೂಡುವುದೆಂಬುದಾಗಿ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳಿಗೆ ವಾನಳ್ಳಿಯವರು ಸ್ವತಃ ಪ್ರಶ್ನೆಗಳನ್ನು ಕೇಳುವ ಮುಖಾಂತರ ಮಕ್ಕಳಿಗೆ ಮುಂದಿನ ಬದುಕಿನಲ್ಲಿ ಏನಾಗಬೇಕೆಂಬುದರ ಗುರಿಯ ಕುರಿತಾಗಿಯೂ ಸುತ್ತಲಿನ ಗಿಡಮರಗಳ, ದಿನನಿತ್ಯದ ಚಟುವಟಿಕೆಗಳ ಮಾಹಿತಿಗಳನ್ನು ಪಡೆದಿರಬೇಕೆಂಬುದರ ಮಹತ್ವವನ್ನು ತಿಳಿಯಪಡಿಸಿದರು.
ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ಇವರು, ‘ಡಾಕ್ಟರ್ ನಿರಂಜನ ವಾನಳ್ಳಿ ಅವರ ಅಧ್ಯಯನದ ಸಂದರ್ಭದಲ್ಲಿ ವರದಿಗಾರರಿಗೆ ಹೆಚ್ಚಿನ ಮಹತ್ವವಿದ್ದಾಗಲೂ ಆ ಕುರಿತಾದ ಅಧ್ಯಯನದಲ್ಲಿ ಅವಕಾಶ ಇದ್ದರೂ ವರದಿಗಾರರಾಗದೆ, ಉಪನ್ಯಾಸಕರದ ಹಿನ್ನೆಲೆ ಏನು?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ತಮ್ಮ ಅಧ್ಯಯನ ಸಂದರ್ಭದಲ್ಲಿಯೇ ತಮ್ಮ ಹಲವಾರು ಬರವಣಿಗೆಗಳು ಎಲ್ಲರ ಮನೆ – ಮನ ತಲುಪಿದ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಕಲಿಕೆ ಮುಗಿಯುವ ಮೊದಲೇ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಉಪನ್ಯಾಸಕ ಹುದ್ದೆಯಲ್ಲಿಯೇ ಮುಂದುವರೆಯುವಂತಾಯಿತು ಎಂಬ ತಮ್ಮ ವೈಯಕ್ತಿಕ ವಿಚಾರವನ್ನು ಪ್ರೀತಿಯಿಂದ ಹಂಚಿಕೊಂಡರು. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವೀಂದ್ರ ನಾಯಕ್, ‘ಮಾಧ್ಯಮಗಳಲ್ಲಿ ಓದುಗರ- ಕೇಳುಗರ ದಾರಿ ತಪ್ಪಿಸುವ ರೀತಿಯ ಅತಿಯಾದ ವರದಿಗಳ ಕುರಿತಾಗಿ’ ಪ್ರಶ್ನಿಸಿದಾಗ ಅಂತಹ ಚಾನಲ್ ಗಳನ್ನು ವೀಕ್ಷಿಸದಿರುವುದು, ಅಂತಹ ಪತ್ರಿಕೆಗಳ ಓದನ್ನು ನಿಲ್ಲಿಸುವುದೇ ಅಂತಹ ತಪ್ಪು ನಡೆಗಳಿಗೆ ನೀಡುವ ಶಿಕ್ಷೆ ಎಂಬ ಕಟುವಾದ ಉತ್ತರವನ್ನು ನೀಡಿದರು. ವಾನಳ್ಳಿ ಅವರ ವೃತ್ತಿ,ಬರವಣಿಗೆಗಳ ಕುರಿತು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ತಾವು ಕುಲಪತಿಗಳಾಗಿ ಸೇರಿದ ಕುರಿತು, ಅದರ ಅವಧಿಗಳ ಕುರಿತಾಗಿಯೂ, ತಮ್ಮ ಬರವಣಿಗೆಗಳ ಕುರಿತಾಗಿಯೂ ಸೋಡಿಗದ್ದೆಯ ಚೆಲುವೆಯರು, ಪುಸ್ತಕದ ಶಂಕರಣ್ಣನಿಗೆ ವಿದಾಯ, ಜಡ್ಡಿಗದ್ದೆ ಬಸ್ಸು ಉದಾರಹಣೆ ನೀಡಿದರು.ತಾವು ಬರೆದಂತಹ ಬರಹ ವಿದ್ಯಾರ್ಥಿಗಳ ಪಠ್ಯದಲ್ಲಿ ಬಂದಿರುವ ಕುರಿತಾಗಿಯೂ ವಿವರಿಸಿ ಆತ್ಮೀಯವಾಗಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಸೀತಾ ವಿ. ಭಟ್, ಇಂದಿನ ಆಂಗ್ಲ ವ್ಯಾಮೋಹದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡದ ಒಲವು ಮೂಡಿಸುವುದು ಹೇಗೆಂಬ ಪ್ರಶ್ನೆ ಕೇಳಿದಾಗ ವಾನಳ್ಳಿಯವರು ವಿದ್ಯಾರ್ಥಿಗಳಲ್ಲಿ ನಮ್ಮ ನೋವು – ನಲಿವುಗಳ ಸಂದರ್ಭದಲ್ಲಿ ಒಡಮೂಡಿ ಬರುವ ನಮ್ಮ ಮಾತೃಭಾಷೆ ಬೆಳೆದಾಗ ಮಾತ್ರ ಇತರೆ ವಿಷಯದಲ್ಲಿಯೂ ನಮ್ಮ ಅಭಿವ್ಯಕ್ತಿ ಚೆನ್ನಾಗಿ ಮೂಡುವುದೆಂಬ ಕಿವಿ ಮಾತನ್ನು ತಿಳಿಸಿ, ಮಾತೃಭಾಷೆಯ ಒಳಗಿನ ಅಭಿಮಾನ ಪ್ರೀತಿ ಬೆಳೆಸಿಕೊಳ್ಳುವುದರ ಬಗ್ಗೆ ತಿಳಿ ಹೇಳಿದರು. ಬೇಂದ್ರೆಯವರ 1930 ರ ಸಂದರ್ಭದಲ್ಲಿಯೇ ಬರೆದ ಕನ್ನಡಮ್ಮನ ನೋವಿನ ಕರೆಯ ಕವನವನ್ನು ಬಿತ್ತರಿಸಿ ಕನ್ನಡಕ್ಕಾಗಿ ನಾವು ಕನ್ನಡಿಗರೇ ಒಲವು ತೋರಿಸದಿದ್ದರೆ ಕನ್ನಡ ಬಡವಾಗುವುದೆಂಬ ಕಹಿ ಸತ್ಯವನ್ನು ನುಡಿಯುತ್ತಾ ಕೇಳುಗರ ಕಣ್ಣಂಚು ಒದ್ದೆಯಾಗುವಂತೆ ಮಾಡಿದರು. ಏನಾದರೂ ಆಗು – ಮೊದಲು ಮಾನವನಾಗಿ, ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸದಾ ಸಿದ್ಧರಿರಬೇಕೆಂಬ ಜಾಗೃತಿಯ ಮಾತುಗಳನ್ನು ನುಡಿದರು.
ಪ್ರಸಕ್ತ ವಾಸ್ತವಿಕತೆಯಲ್ಲಿ ನಡೆಯುತ್ತಿರುವಂತಹ ಭ್ರಷ್ಟಾಚಾರದ ಕುರಿತಾಗಿ ವಾನಳ್ಳಿಯವರು ಬರಹಗಳನ್ನು ಬರೆದ ಬಗ್ಗೆ ಪ್ರಶ್ನೆಗಳು ಮೂಡಿಬಂದಾಗ .. ತಾವು ಕುಲಪತಿಗಳಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ, ಅಲ್ಲದೆ ತಮ್ಮ ಅಷ್ಟು ದಿನಗಳ ಬದುಕಿನ ನಡೆಯಲ್ಲಿ ಎದುರಿಸಿದಂತಹ ಬಹಳಷ್ಟು ಅಂತಹ ಅನುಭವಗಳ ಸಂದರ್ಭಗಳನ್ನು ನೆನಪಿಸಿಕೊಂಡು ಆ ಕುರಿತಾಗಿಯೂ ಬರಹಗಳನ್ನು ಬರೆದಿದ್ದೇನೆಂಬ ಮಾತುಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ಭಾರತದ ಸಂಸ್ಕೃತಿಯ ರಾಯಭಾರಿಯಾಗಿ ಕಜಕಿಸ್ಥಾನದಲ್ಲಿ ತಾವು ಕಳೆದಂತಹ ಆರು ತಿಂಗಳ ಅವಧಿಯ ಅನುಭವಗಳನ್ನು ಬರೆದಿಟ್ಟ ತಶಾಕುರ್ ತಜಾಕಿಸ್ತಾನ್ ಪುಸ್ತಕವನ್ನು ಶಾಲೆಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರೊ. ಎನ್ ವಿ ಜಿ ಭಟ್ಟರಿಗೆ ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ. ಜೆ. ಎಫ್. ಲಯನ್ ತ್ರಿವಿಕ್ರಂ ಪಟವರ್ಧನ್ ಸ್ವಾಗತಿಸಿದರು. ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದಂತಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರೊ.ಎನ್.ವಿ ಜಿ ಭಟ್ ಅವರು ಮಾತನಾಡುತ್ತ ಅತ್ಯಂತ ಸರಳ, ಸಂಪನ್ಮೂಲ ವ್ಯಕ್ತಿಗಳಾದ ಡಾ. ನಿರಂಜನ್ ವಾನಳ್ಳಿ ಅವರನ್ನು ಕನ್ನಡ ರಾಜ್ಯೋತ್ಸವದ ಈ ಸಮಾರಂಭಕ್ಕೆ ಅತಿಥಿಯಾಗಿ ಪಡೆದಿರುವುದು ನಮ್ಮ ಸುಯೋಗವೆಂದು ಪ್ರೀತಿ ಪೂರ್ವಕವಾಗಿ ಹೇಳಿದರು. ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವೀಂದ್ರ ನಾಯಕ್ ಅವರು ವಂದಿಸಿದರು. ಲಯನ್ಸ ಶಾಲಾ ಮಕ್ಕಳ ಸುಮಧುರ ಕನ್ನಡ ಗೀತೆ ಸಂಗೀತ ಶಿಕ್ಷಕಿಯವರಾದ ಶ್ರೀಮತಿ ದೀಪಾ ಶಶಾಂಕ ಹೆಗಡೆ ಇವರ ಮಾಗಱದಶಱನದಲ್ಲಿ ಮೂಡಿಬಂತು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಂ. ಜೆ. ಎಫ್. ಲಯನ್ ಪ್ರಭಾಕರ್ ಹೆಗಡೆ ಅವರು, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾದ ಎಂ. ಜೆ. ಎಫ್. ಲಯನ್ ರಮಾ ಪಟವರ್ಧನ್ ಅವರು, ಲಯನ್ಸ್ ಶಾಲೆಯ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಲಯನ್ಸ್ ಕ್ಲಬ್ಬಿನ, ಲಿಯೋ ಕ್ಲಬಿನ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಹ ಶಿಕ್ಷಕಿಯಾದ ಶ್ರೀಮತಿ ಮುಕ್ತಾ ನಾಯ್ಕ್ ಇವರ ಮಾರ್ಗದರ್ಶನದಲ್ಲಿ ಲಿಯೊ ಶ್ರೇಯ ಬಡಿಗೇರ್ ಮತ್ತು ಕುಮಾರಿ ವರ್ಷ ಹೆಗಡೆ ಕಾರ್ಯಕ್ರಮವನ್ನು ಸರಳವಾಗಿ, ಸುಂದರವಾಗಿ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top