ಶಿರಸಿ: ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿನ ಹೈನುಗಾರರ ಬಹುದಿನದ ಬೇಡಿಕೆಯಾಗಿದ್ದ ಹಾಲಿನ ದರ ಏರಿಸುವ ಪ್ರಕ್ರಿಯೆಗೆ ರಾಜ್ಯ ಸರಕಾರ ಸೋಮವಾರ ಹಸಿರು ನಿಶಾನೆ ತೋರಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಧಾರವಾಡ ಹಾಲು ಒಕ್ಕೂಟ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಅನೇಕ ತಿಂಗಳಿನಿಂದ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರನ್ನು ನಿಯೋಗದ ಮೂಲಕ ಸಂಪರ್ಕಿಸಿ ಮನವಿ ಸಲ್ಲಿಸಲಾಗಿತ್ತು. ಇದೀಗ ನಮ್ಮ ಬಹುದಿನದ ಬೇಡಿಕೆಯನ್ನು ರಾಜ್ಯ ಸರಕಾರ ಆದ್ಯತೆಯ ಮೇಲೆ ಪರಿಗಣಿಸಿ ಹೈನುಗಾರರ ಹಿತಕಾಯಲು ಮುಂದಾಗಿರುವುದು ಸಂತಸ ತಂದಿದೆ. ಪ್ರಸ್ತುತ ರಾಜ್ಯ ಸರಕಾರ ಪ್ರತಿ ಲೀಟರ್ ಗೆ 3 ರೂಪಾಯಿ ದರವನ್ನು ಹೆಚ್ಚಿಸಲು ಸಮ್ಮತಿ ಸೂಚಿಸಿದೆ. 3.5% Fat ಮತ್ತು 8.5 SNF ಇರುವ ಹಾಲಿಗೆ ಈ ಮುಂಚೆ ಪ್ರತಿ ಲೀಟರ್ ಗೆ 31 ರೂಪಾಯಿ ದೊರೆಯುತ್ತಿದ್ದು, ಈಗ ಪ್ರತಿ ಲೀಟರ್ ಗೆ 34 ರೂಪಾಯಿ (ರಾಜ್ಯ ಸರಕಾರದ 5 ರೂಪಾಯಿ ಸಹಾಯಧನ ಸೇರಿ) ದೊರೆಯಲಿದೆ. ಹಾಗು Fat 4% ಇರುವ ಹಾಲಿಗೆ ಪ್ರತಿ ಲೀಟರ್ ಗೆ 35 ರೂಪಾಯಿ (ರಾಜ್ಯ ಸರಕಾರದ 5 ರೂಪಾಯಿ ಸಹಾಯಧನ ಸೇರಿ) ದೊರೆಯಲಿದೆ.
ಒಕ್ಕೂಟವು ಹೈನುಗಾರಿಕೆಯನ್ನು ಮತ್ತು ಹೈನುಗಾರರ ಶ್ರಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಿಸಿರುವ ಈ ಹೆಚ್ಚಿನ ₹ 3 ದರವನ್ನು ನೇರವಾಗಿ ರೈತರಿಗೆ ತಲುಪಿಸಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಈ ರೈತ ಪರ ನಿರ್ಧಾರವನ್ನು ಅಭಿನಂದಿಸುವುದರ ಜೊತೆಗೆ ಈ ನಿಟ್ಟಿನಲ್ಲಿ ಮುಂದಾಗಿ ಹೈನುಗಾರರ ಪರ ನಿಂತಿರುವ ಒಕ್ಕೂಟದ ಅಧ್ಯಕ್ಷ ಶಂಕರ ಮೊಗದ ಸೇರಿದಂತೆ ಸಹಕರಿಸಿದ ಎಲ್ಲ ಸಚಿವರಿಗೆ, ಅಧಿಕಾರಿಗಳಿಗೆ ಜಿಲ್ಲೆಯ ಸಮಸ್ತ ಹೈನುಗಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.