ಕಾರವಾರ: ಹಿಂದೂ ಧರ್ಮದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿಲುವನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.
ಬುಧವಾರ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಹಿಂದೂ ಧರ್ಮ ಅಶ್ಲೀಲ ಎಂದು ಬಳಕೆ ಮಾಡಿದ್ದನ್ನು ಬಿಜೆಪಿ ಖಂಡಿಸಿದೆ. ಅವರ ವಿರುದ್ಧ ಈಗಾಗಲೇ ಬಿಜೆಪಿ ಪ್ರತಿಭಟನೆಗಳನ್ನು ಕೂಡಾ ನಡೆಸಿದೆ
ದುರಂತವೆಂದರೆ, ಜಗತ್ತಿನ ಯಾವುದೇ ಧರ್ಮವನ್ನು ಅವಹೇಳನ ಮಾಡಿದರೆ ಏನಾಗುತ್ತೆಂತ ಎಲ್ಲರಿಗೂ ಗೊತ್ತಿದ್ದು, ಇಷ್ಟೆಲ್ಲಾ ಅವಮಾನವಾದಾಗ ಎಲ್ಲಾ ಧರ್ಮಗಳು ಸಮಾನ ಅನ್ನುವ ಡಿ.ಕೆ ಶಿವಕುಮಾರ ಹಾಗೂ ಸಿದ್ಧರಾಮಯ್ಯ ಸುಮ್ಮನಿರುವುದು ಯಾಕೆಂದು ಗೊತ್ತಿಲ್ಲ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರ ಹೇಳಿಕೆ ಸಂಬಂಧ ಸಿದ್ಧರಾಮಯ್ಯ ಹಾಗೂ ಡಿಕೆಶಿಯವರ ನಿಲುವೇನು ಅಂತಾ ಸ್ಪಷ್ಟಪಡಿಸಬೇಕಿದೆ. ಸುಮ್ಮನಿದ್ದರೇ ಹಿಂದೂ ಧರ್ಮದ ಬಗ್ಗೆ ಲಘುವಾಗಿ ಮಾತನಾಡಿದವರನ್ನು ನೀವು ಸಮರ್ಥನೆ ಮಾಡುತ್ತೀರಾ, ಅಥವಾ ಹಿಂದೂ ಸಮುದಾಯದ ಮೇಲೆ ಸಹಾನುಭೂತಿ ತೋರಿ, ಅವರ ಮಾತನ್ನು ಖಂಡಿಸಿ ಕ್ರಮ ಕೈಗೊಳ್ಳುತ್ತೀರಾ ಇಲ್ಲದಿದ್ದರೇ ತಪ್ಪಾಗಿದೆ ಎಂದು ಹೇಳಿಸುತ್ತೀರಾ ಅಥವಾ ಅಸಹಾಯಕರಾಗಿ ಇರುತ್ತೀರಾ ಎಂದು ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯ ಕಾರ್ಯಕರ್ತರು ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ದೂರು ನೀಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.