ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ಮಾಸ್ತಿಮನೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಪಘಾತ ಮಾಡಿದ ಆರೋಪಿ ಕಾರು ಚಾಲಕ ಬೆಂಗಳೂರು ಮತ್ತಿಕೆರೆಯ ಕಾರ್ತಿಕ್ ಎಂ.ಟಿ. ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕುಮಾರ ಜೆ.ರವರು ವಿಚಾರಣೆ ನಡೆಸಿ 3 ವರ್ಷ ಜೈಲು ಶಿಕ್ಷೆ ಮತ್ತು ರೂಪಾಯಿ 7,500/- ದಂಡ ವಿಧಿಸಿದ್ದಾರೆ.
ಆರೋಪಿಯು 2016ರ ಏ.03ರಂದು ಬೆಳಿಗ್ಗೆ 10 ಗಂಟೆ ಸಮಯಕ್ಕೆ ತನ್ನ ಕಾರನ್ನು ಗೇರುಸೊಪ್ಪ ಕಡೆಯಿಂದ ಸಾಗರ ಕಡೆಗೆ ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರುಗಡೆಯಿಂದ ಅಂದರೆ ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಮಾರುತಿ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಮಾರುತಿ ಓಮಿನಿಯಲ್ಲಿ ಪ್ರಯಾಣಿಸುತ್ತಿದ್ದ 6 ಜನ ಪ್ರಯಾಣಿಕರಿಗೆ ಗಾಯನೋವುಂಟು ಮಾಡಿದ್ದು ಮತ್ತು ಮಾರುತಿ ಓಮಿನಿ ಚಾಲಕ ಸಂಪತಕುಮಾರ ಇವರಿಗೆ ತೀವ್ರ ಸ್ವರೂಪದ ಗಾಯವುಂಟಾಗಿದ್ದು, ನಂತರ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದರು.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಆಗಿನ ಪಿಎಸ್‌ಐ ಗಣೇಶ ಬಿ.ಜೊಗಳೇಕರ ಮತ್ತು ಆಗಿನ ಸಿಪಿಐ ಕೆ.ಕುಮಾರಸ್ವಾಮಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ವಕೀಲರಾದ ಸಂಪದಾ ಅಶೋಕ ಗುನಗಾ ಈ ಪ್ರಕರಣದಲ್ಲಿ 10 ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.