ಭಟ್ಕಳ: ತಾಲೂಕಿನ ಬೈಲೂರಿನ ದೊಡ್ಡ ಬಲಸೆ ಗ್ರಾಮದ ಸರಸ್ವತಿ ಹೊಳೆಯನ್ನು ಅವೈಜ್ಞಾನಿಕವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆಯೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ತಹಶೀಲ್ದಾರ ಸುಮಂತ ಹಾಗೂ ಸಣ್ಣ ನೀರಾವರಿಯ ಇಲಾಖೆಯ ಎಂಜಿನಿಯರ್ ವಿನೋದಕುಮಾರ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಸ್ತು ಸ್ಥಿತಿಯ ವರದಿ ಪಡೆದುಕೊಂಡಿದ್ದಾರೆ. ಜೊತೆಗೆ ಸ್ಥಳೀಯರ ವಾದ ಹಾಗೂ ಜಾಗ ಖರೀದಿ ಮಾಡಿದ ವ್ಯಕ್ತಿಯ ವಾದವನ್ನು ಸಹ ಕಂದಾಯ ಇಲಾಖೆಯ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಬೈಲೂರಿನ ದೊಡ್ಡ ಬಲಸೆಯ ಸರಸ್ವತಿ ಹೊಳೆಯು ಅನಾದಿ ಕಾಲದಿಂದಲೂ ಸಮುದ್ರಕ್ಕೆ ನೈಸರ್ಗಿಕವಾಗಿ ಸೇರುತ್ತಿದೆ. ಹೊಳೆಯ ನೀರಿನ ಹರಿವು ಹೆಚ್ಚಾದಂತೆ ಇಲ್ಲಿನ ಖಾಸಗಿ ಜಾಗವನ್ನು ಸೇರಿದಂತೆ ಇಲ್ಲಿನ ಖಾಸಗಿ ಜಾಗದ ಮಣ್ಣು ಸಹಿತ ಕೊಚ್ಚಿ ಹೋಗಿ ಅದರ ವಿಸ್ತಾರ ಹೆಚ್ಚಾಯಿತು. ಬೈಲೂರು ಗ್ರಾಮದ ಸಮುದ್ರ ತೀರದಲ್ಲಿನ ಸರ್ವೇ ನಂಬರ್ 444 ಮತ್ತು 605ರ ಪಕ್ಕದಲ್ಲಿ ಸರಸ್ವತಿ ಹೊಳೆಯು ಹರಿಯುತ್ತಿದ್ದು, ಈ ಜಾಗವನ್ನು ಮಾಜಿ ಶಾಸಕರು ಖರೀದಿ ಮಾಡಿದ್ದಾರೆ. ಸದ್ಯಕ್ಕೆ ಈ ಖಾಸಗಿ ಜಾಗದ 2 ಗುಂಟೆ ಜಾಗವು ಹೊಳೆಯಲ್ಲಿಯೇ ಇದ್ದು, ಇದಕ್ಕೆ ಪ್ರತ್ಯೇಕ ಸರ್ವೇ ಮಾಡಿಸಿ ಹೊಳೆಯ ಗಾತ್ರ ಚಿಕ್ಕದಾಗದಂತೆ ಕ್ರಮಕ್ಕೆ ಮುಂದಾಗಬೇಕೆಂಬುದು ಗ್ರಾಮಸ್ಥರ, ರೈತರ ಬೇಡಿಕೆಯಾಗಿದೆ. ಆದರೆ ಹೊಳೆಯಲ್ಲಿನ ಜಾಗವು ಖಾಸಗಿ ಅವರದ್ದಾಗಿದ್ದರ ಹಿನ್ನೆಲೆ ಸರಕಾರಿ ಸರ್ವೇ ಮಾಡಿಸಲು ಅವಕಾಶ ಇದೆಯಾ ಇಲ್ಲವಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯೊಂದಿಗೆ ಇಲಾಖೆಯು ಸರ್ವೇ ಕಾರ್ಯಕ್ಕೆ ಮುಂದಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸಮುದ್ರದ ನೀರು ಜಮೀನಿಗೆ ಹೋಗದಂತೆ ನೀರಿನ ತಡೆಗೆ ತಡೆಗೋಡೆಯನ್ನು 10-15 ವರ್ಷದ ಹಿಂದೆ ಹೊಳೆಯ ಎರಡು ಕಡೆ ಕೋಟ್ಯಾಂತರ ರೂ. ಅನುದಾನದಲ್ಲಿ ಚಿಕ್ಕ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗಿತ್ತು. ಸದ್ಯಕ್ಕೆ ಈ ತಡೆಗೋಡೆಗಿಂತ ನೀರಿನ ಹರಿವು ಹೆಚ್ಚಾಗಿದ್ದು, ತಡೆಗೋಡೆ ಭಾಗದಲ್ಲಿಯೇ ಖಾಸಗಿ ವ್ಯಕ್ತಿಯ ಜಾಗವಿದ್ದು, ಮುಂದೆ ಈ ಜಾಗದಲ್ಲಿನ ತಡೆಗೋಡೆಗೆ ಸಮಸ್ಯೆ ಆಗಿದ್ದಲ್ಲಿ ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಿದರೂ ಸಹ ಜಾಗ ಖರೀದಿ ಮಾಡಿದ ಖಾಸಗಿ ವ್ಯಕ್ತಿಗೆ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಹೊಳೆಯ ಜಾಗದಲ್ಲಿನ 2 ಗುಂಟೆ ಜಾಗದಲ್ಲಿನ ಹೊಳೆಯಲ್ಲಿನ ಹೂಳನ್ನು ತೆಗೆದು ಮಣ್ಣು ಹಾಕಿದ್ದಲ್ಲಿ ಹೊಳೆಯ ಮೊದಲಿನ ಹರಿವಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಜಾಗ ಖರೀದಿ ಮಾಡಿದ ವ್ಯಕ್ತಿಯ ಅಭಿಪ್ರಾಯವಾಗಿದೆ
ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ: ಉಪವಿಭಾಗಾಧಿಕಾರಿ
ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಮುಂದಿನ ಹಂತದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ತಿಳಿಸಿದ್ದಾರೆ.
ಸಮಸ್ಯೆಯ ಕುರಿತು ಗಮನಕ್ಕೆ ಬಂದಿದೆ. ಪರಿಹಾರದ ವಿಷಯದಲ್ಲಿ ಮೇಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ತಿಳಿಸಿದ್ದಾರೆ.