ಕಾರವಾರ: ರಾಜ್ಯದ ನಾಡದೋಣಿ ಮೀನುಗಾರರಿಗೆ ಸಮರ್ಪಕವಾಗಿ ಸೀಮೆಎಣ್ಣೆ (ಕೆರೋಸಿನ್) ಒದಗಿಸುವಂತೆ ಆಗ್ರಹಿಸಿ ಉತ್ತರಕನ್ನಡ ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಗಿದೆ.
ಕರ್ನಾಟಕ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆರೋಸಿನ್ ಬಳಸಿ (ಔಟ್‌ಬೋರ್ಡ್ ಎಂಜಿನ್) ನಾಡದೋಣಿ ಮೀನುಗಾರಿಕೆ ಮಾಡುವ ಸುಮಾರು ಹತ್ತು ಸಾವಿರ ಕುಟುಂಬಗಳಿವೆ. ಒಂದು ದೋಣಿಯಲ್ಲಿ ಮೂರ್ನಾಲ್ಕು ಜನರು ಮೀನುಗಾರಿಕೆ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಕನ್ನಡವೊಂದರಲ್ಲೆ ಸುಮಾರು ಎರಡು ಸಾವಿರ ನಾಡದೋಣಿಗಳು ಇವೆ. ಈ ದೋಣಿಗಳಿಗೆ ಸೆಪ್ಟೆಂಬರ್ ತಿಂಗಳಿನಿಂದ ಮೇ ಕೊನೆಯವರೆಗೆ, ಅಂದರೆ 9 ತಿಂಗಳೂ ಸರ್ಕಾರ ಕೆರೋಸಿನ್ ಅನ್ನು ಸಬ್ಸಿಡಿ ದರದಲ್ಲಿ ನೀಡುವ ಮೂಲಕ ಮೀನುಗಾರಿಕೆ ವೃತ್ತಿ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಿತ್ತು. ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ಕೆರೋಸಿನ್ ಅಸಮರ್ಪಕ ಪೂರೈಕೆಯಿಂದ ನಮ್ಮ ವೃತ್ತಿ ತಟಸ್ಥವಾಗುವಂತಾಗಿದೆ ಎಂದು ಮೀನುಗಾರರು ಮನವಿಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಸೆಪ್ಟೆಂಬರ್‌ನಿಂದ ಸಮರ್ಪಕವಾಗಿ ಕೆರೋಸಿನ್ ಪೂರೈಕೆಯಾಗಲಿದೆ ಎಂಬ ನಂಬಿಕೆ ಇತ್ತು. ಆದರೆ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಿನ ಕೆರೋಸಿನ್ ಪೂರೈಕೆಯಾಗಲೇ ಇಲ್ಲ. ಸಾಮಾನ್ಯವಾಗಿ ನಾಡದೋಣಿ ಮೀನುಗಾರರಿಗೆ ಆಗಸ್ಟ್ನಿಂದ ಡಿಸೆಂಬರ್ ಐದು ತಿಂಗಳು ಮೀನು ಶಿಖಾರಿಯ ಪ್ರಮುಖ ಸಂದರ್ಭ. ಇದೇ ವೇಳೆಯಲ್ಲಿ ಉತ್ಕೃಷ್ಟ ಜಾತಿಯ ಗಿಲ್‌ನೆಟ್‌ನಂಥ ಮೀನುಗಳನ್ನು ಹಿಡಿದು ವರ್ಷದ ಉತ್ಪನ್ನ ಬಹುತೇಕ ಈ ಅವಧಿಯಲ್ಲಿ ಮಾಡಿಕೊಳ್ಳುವ ಪರಿಪಾಟವಿದೆ. ಈ ಅವಧಿಯಲ್ಲಿ ಆಳ ಸಮುದ್ರದಿಂದ ತೀರ ಪ್ರದೇಶಕ್ಕೆ ಮೀನುಗಳು ವಲಸೆ ಬರಲಿದ್ದು, ಡಿಸೆಂಬರ್ ನಂತರ ಮೂಡಣ ಗಾಳಿ (ಈಸ್ಟ್ ವಿಂಡ್) ಪ್ರಾರಂಭಗೊಂಡು ಮೀನುಗಳು ತೀರ ಪ್ರದೇಶದಿಂದ ಆಳ ಸಮುದ್ರಕ್ಕೆ ವಲಸೆ ಹೋಗಿಬಿಡುತ್ತವೆ. ಹೀಗಿರುವಾಗ ಅನೇಕ ತಿಂಗಳಿಂದಕೆರೋಸಿನ್ ನೀಡುವಂಥೆ ಮನವಿ ಮಾಡಿಕೊಂಡರೂ ಈವರೆಗೆ ಪೂರೈಕೆ ಮಾಡಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಇನ್ನು ಮನವಿ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೀನುಗಾರ ಮುಖಂಡ ಸದಾನಂದ ಹರಿಕಂತ್ರ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದು ಸರ್ಕಾರದ ಗುರಿ. ಆದರೆ ನಮಗೆ ಉದ್ಯೋಗ ಬೇಕಿಲ್ಲ. ಮೀನುಗಾರರಿಗೆ ಕೈತುಂಬ ಕೆಲಸವಿದೆ. ಆ ಕೆಲಸ ಮಾಡಿಕೊಳ್ಳಲು ಸೌಕರ್ಯ ಕೊಡಿ ಎಂದು ಆಗ್ರಹಿಸಿದ್ದಾರೆ. ಕೂಡಲೇ ಸರ್ಕಾರ ಕೆರೋಸಿನ್ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರರು ಆತ್ಮಹತ್ಯೆ ಮಾಡಿಕೊಳ್ಳುವಂಥ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೀನುಗಾರರಿಗೆ ಮೀನುಗಾರಿಕೆ ಬಿಟ್ಟು ಬೇರಾವ ಪರ್ಯಾಯ ಉದ್ಯೋಗ ಇಲ್ಲ. ಸರ್ಕಾರದಿಂದ ವರ್ಷವೂ ಅಸಮರ್ಪಕವಾಗಿ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ನಾಡದೋಣಿ ಮೀನುಗಾರರ ಪರಿಸ್ಥಿತಿ ಅತಂತ್ರವಾದಂತಾಗಿದೆ ಎನ್ನುವ ರಾಷ್ಟ್ರೀಯ ಮೀನುಗಾರರ ಸಂಘದ ಜಿಲ್ಲಾಧ್ಯಕ್ಷ ಗಣಪತಿ ಮಾಂಗ್ರೆ, ಮುಖ್ಯಮಂತ್ರಿಗಳು ತತಕ್ಷಣ ಸೀಮೆಎಣ್ಣೆ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಮೀನುಗಾರರಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮೀನುಗಾರರ ಮುಖಂಡರಾದ ವಿಠ್ಠಲ, ಬಾಳ, ಗಣಪತಿ ಅಘನಾಶಿನಿ, ವಿಯಕ ಅಂಬಿಗ, ಚಂದ್ರಕಾಂತ ಅಂಬಿಗ ಹಸನ ಅದಮ್, ಚಂದ್ರಕಾಂತ ಹರಿಕಂತ್ರ ಮುಂತಾದವರು ಇದ್ದರು.