ಅಂಕೋಲಾ: ಜಿಲ್ಲೆಯಾದ್ಯಂತ ಒಂದು ವರ್ಷಗಳಿಂದ ಸ್ಥಗಿತವಾಗಿದ್ದ ಅಕ್ರಮ ದಂಧೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನ ಪೆನ್ನೇಕರ್ ವರ್ಗಾವಣೆಯ ಬೆನ್ನಲ್ಲೇ ಮತ್ತೆ ಕುಡಿಯೊಡೆದು ಚಿಗುರುವ ಸಿದ್ಧತೆ ನಡೆಸಿಕೊಳ್ಳುತ್ತಿದೆ. ವರ್ಗಾವಣೆಯನ್ನೇ ಕಾಯುತ್ತಿದ್ದ ದಂಧೆಕೋರರು ಈಗ ತಮ್ಮ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸಲು ರಾಜಕಾರಣಿಗಳ ಮೊರೆಹೋಗಿದ್ದಾರೆ ಎನ್ನಲಾಗಿದೆ.
ಡಾ.ಪೆನ್ನೇಕರ್ ವರ್ಗಾವಣೆಗೊಳ್ಳುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದ ಓಸಿ ಬುಕ್ಕಿಗಳು, ದುಂಡುಮೇಜಿನ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ದಂದೆ ಪ್ರಾರಂಭಿಸಲು ರಾಜಕಾರಣಿಗಳ ಕೃಪಾಶೀರ್ವಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎನ್ನಲಾಗಿದೆ. ಡಾ.ಪೆನ್ನೇಕರ್ ಬಂದಾಗಿನಿಂದ ಮಟ್ಕಾ ದಂಧೆಗೆ ಶೇಕಡಾ 80ರಷ್ಟು ಕಡಿವಾಣ ಹಾಕಿದ್ದರು. ಅಲ್ಲಲ್ಲಿ ಪೊಲೀಸರ ಕಣ್ತಪ್ಪಿಸಿ ಆನ್ಲೈನ್ ಮಟ್ಕಾ ನಡೆಯುತ್ತಿತ್ತು. ಆ ಸಮಯದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಓಸಿ ಬುಕ್ಕಿಗಳು ಹುಟ್ಟಿಕೊಂಡಿದ್ದು, ಡಾ.ಪೆನ್ನೇಕರ್ ವರ್ಗಾವಣೆ ನಂತರ ಮಟ್ಕಾದ ಹಿಡಿತ ಯಾರ ಕೈಗೆ ವಹಿಸಬೇಕೆನ್ನುವ ತಲೆಬಿಸಿ ದಂಧೆಗೆ ಕೈಜೋಡಿಸೋ ಜನಪ್ರತಿನಿಧಿಗಳದ್ದಾಗಿದೆ.
ಡಾ.ಪೆನ್ನೇಕರ್ ಅಕ್ರಮ ದಂಧೆಗೆ ಬ್ರೇಕ್ ಹಾಕಲು ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದರು. ಹಾಗೆಯೇ ದಂಧೆಕೋರರನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದರು. ಮಾಹಿತಿ ನೀಡಿದ ಬಗ್ಗೆ ಅವರವರಲ್ಲೇ ಗೊಂದಲಗಳುಂಟಾಗಿ ಅಂದಿನಿಂದ ದಂಧೆಕೋರರ ಮಧ್ಯೆ ಬಿರುಕು, ಭಿನ್ನಮತ ಉಂಟಾಗಿತ್ತು. ಅದರಿಂದ ಹಲವರ ಆದಾಯಕ್ಕೆ ಕತ್ತರಿ ಬಿದ್ದಿತ್ತು. ಆ ಒಳ ಜಗಳವನ್ನು ಶಮನ ಮಾಡಲು ಅಕ್ರಮ ದಂಧೆಯ ಪೋಷಕ ಮುಖಂಡರು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಾದ್ಯಂತ ಒಂದು ವರ್ಷಗಳಿಂದ ಮಕಾಡೆ ಮಲಗಿದ್ದ ಅಕ್ರಮ ಮರಳು ಲಾರಿಗಳು ಡಾ.ಸುಮನ ಪೆನ್ನೇಕರ್ ವರ್ಗಾವಣೆ ಬಳಿಕ ಮತ್ತೆ ಮೈಕೊಡವಿ ಎದ್ದು ನಿಂತಿದೆ ಎನ್ನಲಾಗಿದೆ. ಡಾ.ಪೆನ್ನೇಕರ್ ಅಕ್ರಮ ಮರಳಿಗೆ ಪರವಾನಗಿ ನೀಡಿರಲಿಲ್ಲವಾದರು, ಮರಳು ಸಾರ್ವಜನಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಗಮನಿಸಿ ಅಕ್ರಮ ಮರಳು ಲಾರಿಗಳ ಮೇಲೆ ಪ್ರಕರಣ ದಾಖಲಿಸಲು ಅಷ್ಟೊಂದು ಪ್ರಾಮುಖ್ಯತೆ ನೀಡಿರಲಿಲ್ಲ. ಆದರೂ ಭಯಕ್ಕೆ ಮರಳು ಲಾರಿಗಳು ಫೀಲ್ಡಿಗಿಳಿದಿರಲಿಲ್ಲ. ಡಾ.ಪೆನ್ನೇಕರ್ ವರ್ಗಾವಣೆ ಬಳಿಕ ಲಾರಿಗಳು ನಿದ್ದೆಯಿಂದ ಮೈಕೊಡವಿ ಎದ್ದು ನಿಲ್ಲಲಾರಂಭಿಸಿದೆ ಎನ್ನಲಾಗಿದೆ.