ಭಟ್ಕಳ: ತಾಲೂಕಿನ ಅಳ್ವೆಕೋಡಿಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಇದರಿಂದ ಪ್ರತಿದಿನ ಬೆಳಗ್ಗಿನ ವ್ಯಾಸಂಗ ಹಾಳಾಗುತ್ತಿದೆ ಎಂದು ಅಳ್ವೆಕೋಡಿ ಭಾಗದ ನೂರಾರು ವಿದ್ಯಾರ್ಥಿಗಳು ಸಾರಿಗೆ ಡಿಪೋ ಮ್ಯಾನೇಜರ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಅಳ್ವೆಕೋಡಿ ಪುರಾಣ ಪ್ರಸಿದ್ಧ ಸ್ಥಳವೂ ಹೌದು. ಇಲ್ಲಿ ಪ್ರತಿದಿನ ನೂರಾರು ಸಂಖ್ಯೆಯ ಭಕ್ತರು ಇಲ್ಲಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿಂದ ಪ್ರತಿದಿನ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಶಿರಾಲಿ, ಭಟ್ಕಳ, ಹೊನ್ನಾವರ, ಸರ್ಪನಕಟ್ಟೆ, ಕುಂದಾಪುರ ಕಾಲೇಜುಗಳಿಗೆ ತೆರಳುತ್ತಾರೆ. ಮೊದಲು ಬೆಳಗಿನ ಜಾವ ಎರಡು ಬಸ್ಸು ಬರುತ್ತಿದ್ದು, ಇತ್ತೀಚಿಗೆ ಒಂದೇ ಬಸ್ಸು ಬರಲು ಆರಂಭವಾಗಿದೆ. 50 ಸೀಟುಗಳ ಸಾಮರ್ಥ್ಯವುಳ್ಳ ಬಸ್ಸುಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಜೋತಾಡುತ್ತಾ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಬರುವ ಒಂದು ಬಸ್ಸು ಕೂಡಾ ಸಮಯಕ್ಕೆ ಬರುತ್ತಿಲ್ಲ.
ಇನ್ನು ಪಾಸ್ ಇದ್ದರೂ ಪ್ರತಿದಿನ ಅಟೋರಿಕ್ಷಾದಲ್ಲಿ ತೆರಳಬೇಕಾಗಿದ್ದು, ನಿಲ್ದಾಣದಲ್ಲಿ ಅಧಿಕಾರಿಗಳನ್ನ ಕೇಳಿದರೆ ಪಾಸ್ ಹಣ ವಾಪಾಸ್ ತೆಗೆದುಕೊಂಡಿ ಹೋಗಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೆ ಸುಮಾರು 5 ಕಿ.ಮೀ. ದೂರವಿರುವ ಬಸ್ ಡಿಪೋಗೆ ತೆರಳಿ ಅಲ್ಲಿನ ಘಟಕ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ನಾಳೆ(ಮಂಗಳವಾರ)ಯಿಂದ ಹಿಂದಿನಂತೆ ಬಸ್ ಬಿಡುವುದಾಗಿ ಮ್ಯಾನೇಜರ್ ಭರವಸೆ ನೀಡಿದ್ದಾರೆ. ಆದರೆ ಇದಕ್ಕೆ ಬಗ್ಗದ ವಿದ್ಯಾರ್ಥಿಗಳು, ಲಿಖಿತವಾಗಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಬಳಿಕ ವಿದ್ಯಾರ್ಥಿಗಳ ಮನವೊಲಿಸಿ ತರಗತಿಗಳಿಗೆ ಹಾಜರಾಗುವಂತೆ ಮ್ಯಾನೇಜರ್ ಕಳುಹಿಸಿದ್ದಾರೆ.
ಪ್ರತಿಭಟನೆಯಲ್ಲಿ ನ್ಯೂ ಇಂಗ್ಲೀಷ್ ಪಿ.ಯು ಕಾಲೇಜು, ಸಿದ್ದಾರ್ಥ ಕಾಲೇಜು, ಸರ್ಪನಕಟ್ಟೆ ಐಟಿಐ ಕಾಲೇಜು ಸೇರಿದಂತೆ ಇತರ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.