ಬೆಂಗಳೂರು: ಕಾಂಗ್ರೆಸ್ ನ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಹಿಂದೂ ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ ಪದವು ಪರ್ಷಿಯನ್ ಪದವಾಗಿದ್ದು ಭಾರತೀಯ ಪದವೇ ಅಲ್ಲ, ಎಲ್ಲಿಂದಲೋ ಬಂದಿರುವ ಹಿಂದೂ ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ’ ಎಂದು ಹಿಂದೂ ಧರ್ಮವನ್ನು ಟೀಕಿಸಿದ್ದಾರೆ. ಸತೀಶ್ ಜಾರಕಿಹೊಳಿಯ ಈ ದ್ವೇಷಪೂರಿತ ಮಾತುಗಳನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ. .
ಹಿಂದೂ ಧರ್ಮವು ಲಕ್ಷಾಂತರ ವರ್ಷಗಳ ಇತಿಹಾಸವನ್ನು ಹೊಂದಿದೆ. ಸಿಂಧು ನದಿಯಿಂದ ಹಿಂದೂ ಶಬ್ದ, ಹಿಂದೂ ಸಂಸ್ಕೃತಿಯು ಬಂದಿದೆ. ನಮ್ಮ ಋಗ್ವೇದ, ಅಥರ್ವವೇದ, ಮೇರುತಂತ್ರ ಮುಂತಾದ ಸಾವಿರಾರು ವರ್ಷಗಳ ಹಿಂದೆ ರಚಿತವಾದ ಪ್ರಾಚೀನ ಧರ್ಮ ಗ್ರಂಥಗಳಲ್ಲಿ ಹಿಂದೂ ಶಬ್ದದ ಉಲ್ಲೇಖವಿದೆ. ಮೇರುತಂತ್ರದಲ್ಲಿ ‘ಹಿನಾನಿ ಗುಣಾನಿ ದೂಷಯಿತಿ ಇತಿ ಹಿಂದೂ’ ಅಂದರೆ ‘ಹೀನ ದುರ್ಗುಣಗಳನ್ನು ತ್ಯಜಿಸಿದವನೇ ಹಿಂದೂ’ ಎಂಬ ಉಲ್ಲೇಖ ಮಾಡಲಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯ ಸಹ ‘ಹಿಂದೂ ಎಂದರೆ ಒಂದು ಜೀವನ ಪದ್ಧತಿ’ ಎಂದು ಆದೇಶ ನೀಡಿದೆ. ಇಂತಹ ಮಹಾನ್ ಧರ್ಮವನ್ನು ‘ಅಶ್ಲೀಲವಿದೆ’ ಎಂದು ಹೇಳುವವರು ‘ಮುಸ್ಲಿಂ ಮತ್ತು ಕ್ರೈಸ್ತ ಮತಗಳು ಭಾರತದ ಮೂಲ’ ಎಂದು ಹೇಳುವುದು ಇವರ ಹಿಂದೂ ದ್ವೇಷವನ್ನು ತೋರಿಸುತ್ತದೆ. ಹಿಂದೂ ಧರ್ಮದ ಮೂಲದ ಬಗ್ಗೆ ಮಾತನಾಡುವ ಮೊದಲು ನಿಮ್ಮ ನಾಯಕಿ ಸೋನಿಯಾ ಗಾಂಧಿಯ ಮೂಲದ ಬಗ್ಗೆ ಮಾತನಾಡಿ. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಮೇಲೆ ರಾಹುಲ್ ಗಾಂಧಿ ಯಾಕೆ ಚುನಾವಣೆ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ ? ಹಿಂದೂ ಶಬ್ದದ ಮೂಲದ ಬಗ್ಗೆ ಆಕ್ಷೇಪ ಇರುವ ನೀವು ಹಿಂದುಗಳ ಮತ ನಮಗೆ ಬೇಡ ಎಂದು ಹೇಳುವ ಧೈರ್ಯವಿದೆಯೇ ? ಎಂದು ಪ್ರಶ್ನಿಸಿದೆ.
ಸತೀಶ್ ಜಾರಕೀಹೊಳಿ ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮಯಾಚಿಸಬೇಕು, ಇಲ್ಲದಿದ್ದರೆ ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ರಾಜ್ಯವ್ಯಾಪಿ ಆಂದೋಲನ ಮಾಡಲಾಗುವುದು’ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಎಚ್ಚರಿಕೆ ಸಂದೇಶ ನೀಡಿದ್ದಾರೆ.