ನವದೆಹಲಿ: ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಾಗಿದ್ದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ಐಎ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದೆ.
ಶನಿವಾರ ಕರ್ನಾಟಕದ ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರಿನಲ್ಲಿ ದಾಳಿ ನಡೆಸಿರುವ ಎನ್ಐಎ ಕೆ. ಮಹಮ್ಮದ್ ಇಕ್ಬಾಲ್, ಕೆ ಇಸ್ಮಾಯಿಲ್ ಶರೀಫ್, ಇಬ್ರಾಹಿಂ ಶಾ ಎನ್ನುವರನ್ನು ಬಂಧಿಸಿದೆ. ಎನ್ಐಎ ಒಟ್ಟು ಐದು ಕಡೆ ದಾಳಿ ನಡೆಸಿದೆ. ಬಂಧಿತರರಿಂದ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 26 ರಂದು ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಜುಲೈ 27 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯದಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಈ ಪ್ರಕರಣವನ್ನು ಆಗಸ್ಟ್ 4 ರಂದು ರಾಜ್ಯ ಸರ್ಕಾರ ಎನ್ಐಎಗೆ ವಹಿಸಿತ್ತು.
ಸದ್ಯ ಬಂಧಿತ ಮೂವರು ಕೂಡ ಪ್ರವೀಣ್ ಕೊಲೆ ಸಂಚಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇಲ್ಲಿವರೆಗೆ ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಮುಖ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಎನ್ಐಎ ಘೋಷಿಸಿದೆ.