Slide
Slide
Slide
previous arrow
next arrow

ಮಂಜುನಾಥ ಬರ್ಗಿಗೆ ವಿಶ್ವದರ್ಶನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

300x250 AD

ಅಂಕೋಲಾ: ಹುಬ್ಬಳ್ಳಿಯ ಜನನಾಡಿಯ ಧ್ವನಿಯಾಗಿ ಅಪಾರ ಓದುಗ ಪರಿವಾರವನ್ನು ಹೊಂದಿರುವ ವಿಶ್ವದರ್ಶನ ದಿನಪತ್ರಿಕೆಯ ಅಡಿಯಲ್ಲಿ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪರಮ ಜಿನೇಂದ್ರ ವಾಣಿಯ ವರಪುತ್ರ ಮಂಜುನಾಥ ಗಾಂವಕರ ಬರ್ಗಿ ಅವರಿಗೆ ಒಲಿದಿದೆ.
ಬರ್ಗಿಯವರು ಅಡಿಯಿಟ್ಟ ಕ್ಷೇತ್ರದಲ್ಲೆಲ್ಲ ತನ್ನ ಸತ್ವಯುತ ಕೊಡುಗೆಗಳನ್ನು ಸೃಜಿಸಿ ಆ ಕ್ಷೇತ್ರವನ್ನೇ ಸಂಪೂರ್ಣ ಮಂಜುಮಯವಾಗಿ ರೂಪುಗೊಳಿಸಿ ಮಾದರಿಯಾದವರು. ವೃತ್ತಿಯಲ್ಲಿ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರಾಗಿರುವ ಇವರು ವಿದ್ಯಾರ್ಥಿಗಳ ಪಾಲಿಗೆ ಸದಾಕಾಲ ಜ್ಞಾನಾಮೃತವೀವ ಜೇನಾಗಿದ್ದಾರೆ. ತಾನು ಕಲಿಸಬೇಕಾದ ವಿಷಯದ (ಸಂಸ್ಕೃತ, ಕನ್ನಡ, ಇತಿಹಾಸ) ಮೇಲೆ ಹಿಡಿತ ಎಷ್ಟಿದೆ ಎಂದರೆ ಹೊತ್ತಿಗೆ ಬಳಸದೆ ವರ್ಷವಿಡೀ ನಿರಂತರವಾಗಿ ಪರಿಣಾಮಕಾರಿಯಾಗಿ ಬೋಧಿಸಬಲ್ಲರು. ಇದರ ಹಿಂದಿರುವ ಅವರ ಅದ್ಭುತ ಸ್ಮರಣಶಕ್ತಿ ಮತ್ತು ಆಳವಾದ ಅಧ್ಯಯನ ಶ್ರೇಷ್ಠ ಶಿಕ್ಷಕರನ್ನಾಗಿ ರೂಪಿಸಿರುವುದು ವಿಶೇಷ. ಐದು ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿ, ಪ್ರಸ್ತುತ ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನದಲ್ಲಿ ಸಂಸ್ಕೃತ ಸಾಹಿತ್ಯದ ಕುರಿತು ಪಿ.ಎಚ್.ಡಿ ವ್ಯಾಸಂಗ ಮಾಡುತ್ತಿದ್ದಾರೆ.
ಯಕ್ಷಗಾನ ರಂಗದಲ್ಲಿ ಅಪರೂಪದ ಅಭಿಜಾತ ಕಲಾವಿದರಾಗಿರುವ ಮಂಜು ಅವರು ನೃತ್ಯ, ನಿಲುವು, ಹಾವ-ಭಾವ, ಮಾತುಗಾರಿಕೆಯ ಮೂಲಕ ಪ್ರತಿ ಪಾತ್ರಕ್ಕೂ ಜೀವಕಳೆ ತುಂಬಬಲ್ಲರು. ವೃತ್ತಿ ರಂಗಭೂಮಿಯ ಶ್ರೇಷ್ಠಾತಿ ಶ್ರೇಷ್ಠರೊಂದಿಗೆ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ತಾಳಮದ್ದಲೆಯ ಮಾತಿನ ಮಂಟಪದಲ್ಲಿಯೂ ಕೂಡ ದಿಗ್ಗಜರಾದ ಜಬ್ಬಾರ ಸುಮೋ, ಉಜರೆ ಮೊದಲಾದವರ ಜೊತೆಯಲ್ಲಿ ಪಾತ್ರ ನಿರ್ವಹಿಸಿ ಅವರನ್ನೇ ಬೆರಗುಗೊಳಿಸಿದ್ದಾರೆ. ಯಕ್ಷಗಾನ-ತಾಳಮದ್ದಲೆ ಎರಡರಲ್ಲೂ ಸಮರ್ಥರಾಗಿ ಗುರುತಿಸಿಕೊಂಡಿರುವ ವಿರಳಾತಿ ವಿರಳ ಕಲಾವಿದರಲ್ಲಿ ಇವರೂ ಒಬ್ಬರು.
ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಓದುಗ ಬಳಗವನ್ನು ಹೊಂದಿರುವ ಬರ್ಗಿಯವರು ವಿದ್ವತ್ವಪೂರ್ಣ ಬರವಣಿಗೆಯ ಮೂಲಕ ನಮ್ಮನ್ನು ಕಾಡುತ್ತಾರೆ. ಅವರು ಬಳಸುವ ಶಬ್ದ, ವಾಕ್ಯಗಳು ಕಾಗದದಿಂದ ಎದ್ದುಬಂದ ತ್ರಿಡಿ ಚಿತ್ರದಂತೆ ಕುಣಿಯುತ್ತವೆ. ಹತ್ತಾರು ಪುಸ್ತಕಗಳನ್ನು ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಸಮಕಾಲೀನ ಬರಹಗಾರರಲ್ಲಿ ವಿರಳ-ವಿಶಿಷ್ಟ ಪ್ರತಿಭೆ ಎಂದರೆ ತಪ್ಪಾಗಲಾರದು. ಶೋತೃ ವರ್ಗವನ್ನು ತನ್ನ ಚುಂಬಕ ಶಕ್ತಿಯಿಂದ ಹಿಡಿದಿಡಬಲ್ಲ ಅದ್ಭುತ ಮಾತುಗಾರರು ನಮ್ಮ ಬರ್ಗಿ. ಮಂಜು ಅವರ ಉಪನ್ಯಾಸ ಅಥವಾ ತಾಳ ಮದ್ದಲೆ ಇದೆ ಎಂದರೆ ಅವರ ಮಾತಿನ ಅನುರಣಿತ ನಾದವನ್ನು ಸವಿಯಲು ಬರುವ ವರ್ಗವೇ ಇದೆ. ನಡೆದಾಡುವ ವಿಶ್ವಕೋಶದಂತಿರುವ ಇವರು ಸೇವಾ ಕಾನೂನು ತಜ್ಞರು. ಯಾರೇ ಬಂದು, ಎಷ್ಟು ಹೊತ್ತಿಗೆ, ಎಲ್ಲಿಯೇ ಕೇಳಿದರೂ ಅಲ್ಲಿಯೇ ಅವರಿಗೆ ಪರಿಹಾರ ರೂಪದಲ್ಲಿ ಸೇವೆ ನೀಡುತ್ತಾರೆ. ಜಿಲ್ಲೆಯಾದ್ಯಂತ ಇವರ ಸಹಾಯ ಪಡೆದ ಬಹುದೊಡ್ಡ ಸಮೂಹವೇ ಇದೆ.
ಮಂಜುನಾಥ ಗಾಂವಕರ ಎಂದರೆ ಅದೊಂದು ಸಂಘಟನಾ ಶಕ್ತಿ. ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್ ರಾಜ್ಯಾಧ್ಯಕ್ಷರಾಗಿ ವಿಶಿಷ್ಟ ಕಾರ್ಯಯೋಜನೆಯ ಮೂಲಕ ನಾಡಿಗೆ ಮಾದರಿ ಸಂಘಟನೆಯಾಗಿ ರೂಪಿಸಿದ್ದಾರೆ. ಹೀಗೆ ಹತ್ತಾರು ಸಂಘಟನೆಗಳು ಇವರಿಂದ ಅರಳಿ ಸಮಗಂಧ ಬೀರುತ್ತಿವೆ. ಹಲವು ಬಗೆಯ ಅನೂಹ್ಯವಾದ ಪ್ರತಿಭೆಗಳ ಸಂಗಮ ಮಂಜುನಾಥ ಗಾಂವಕರ ಬರ್ಗಿ. ಇಷ್ಟೆಲ್ಲ ಇದ್ದರೂ ಮಂಜು ಅವರು ಸರಳ-ಸಜ್ಜನ-ಸಹಜವಾಗಿರುವ ಅಪರೂಪದ ‘ತವನಿಧಿ’. ಹಾಗಾಗಿಯೇ ವರಿಸ ಬಂದಿದೆ ವಿಶ್ವದರ್ಶನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

300x250 AD
Share This
300x250 AD
300x250 AD
300x250 AD
Back to top