ಜೋಯಿಡಾ : ಸಾಹಿತ್ಯ ಪರಿಷತ್ತಿನ ಕನ್ನಡ ಕಾರ್ತಿಕ, ಅನುದಿನ -ಅನುಸ್ಪಂದನ ಕಾರ್ಯಕ್ರಮದಡಿ ನಗರಬಾವಿ ಕಿ.ಪ್ರಾ ಶಾಲೆಯಲ್ಲಿ ರಸಪ್ರಶ್ನೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ಪಾಂಡುರಂಗ ವೇಳಿಪ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಶುಭಕೋರಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಸುಭಾಷ್ ಗಾವಡಾ, ನಮ್ಮ ನಾಡ ಭಾಷೆ ಕನ್ನಡ ಉಳಿವಿಗೆ ನಾವು ಕನ್ನಡವನ್ನು ಅಪ್ಪಿಕೊಳ್ಳಬೇಕು. ಕನ್ನಡ ಭಾಷೆ ಉಳಿಯದಿದ್ದರೆ ಈ ನಾಡಿನಲ್ಲಿ ಇರುವ ಸಂಸ್ಕೃತಿ ಉಳಿಯಲಾರದು. ಕನ್ನಡವನ್ನು ಮನೆ, ಮನೆಗಳಲ್ಲಿ ತುಂಬಿಕೊಳ್ಳುವ ಮೂಲಕ ಕನ್ನಡ ಭಾಷೆ ಬೆಳೆಸುವ ಜೊತೆ ಸಂಸ್ಕೃತಿಯನ್ನು ಉಳಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾಪ. ತಾಲೂಕಾ ಅಧ್ಯಕ್ಷ ಪಾಂಡುರಂಗ ಪಟಗಾರ, ಶಾಲೆಗಳಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳಲ್ಲಿ ಕನ್ನಡ ನಾಡು ನುಡಿ, ನಾಡಿನ ಹಿರಿಮೆ ಗರಿಮೆಗಳನ್ನು ಪರಿಚಯಿಸುವುದು, ರಸಪ್ರಶ್ನೆ ಕಾರ್ಯಕ್ರಮ ಮಕ್ಕಳಲ್ಲಿ ಸಾಹಿತ್ಯದ, ಸಾಹಿತಿಗಳ ಪರಿಚಯಿಸಿ, ಕನ್ನಡದ ಅಭಿರುಚಿ,ಪ್ರೀತಿ ಬೆಳೆಸುವ ಪ್ರಯತ್ನ ವಾಗಿದೆ. ಇದಕ್ಕೆ ಪಾಲಕರು, ಶಿಕ್ಷಕ ವೃಂದ ಕೈಜೋಡಿಸಿದಕ್ಕೆ ಧನ್ಯವಾದಗಳ ಅರ್ಪಿಸಿದರು. ಗಡಿ ಭಾಗವಾದ ಜೋಯಿಡಾದಲ್ಲಿ ಕನ್ನಡ ತನ ಬೆಳೆಸುವಲ್ಲಿ ಸಹಕರಿಸಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ಜೋಯಿಡಾ ಗ್ರಾಂ.ಪಂ .ಸದಸ್ಯೆ ಚಂದ್ರಿಕಾ ತುಕಾರಾಮ ಮಿರಾಶಿ, ಪಾಂಡುರಂಗ ಗಾವಡಾ, ಸುಭಾಷ ವೇಳಿಪ, ಶಾಲಾ ಮುಖ್ಯೋಪಾಧ್ಯಾಯರಾದ ಗೀತಾ ಪಾಟ್ನೇಕರ, ಉಪಸ್ಥಿತರಿದ್ದರು. ಶಿಕ್ಷಕರಾದ ಎ.ಆರ್.ಗೌಡ ಸ್ವಾಗತಿಸಿದರು. ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಾಡಗೀತೆ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ 22 ಮಕ್ಕಳು ಪಾಲ್ಗೊಂಡಿದ್ದರು. ಪ್ರಥಮ, ದ್ವಿತೀಯ, ತೃತೀಯ ಬಂದ ತಂಡಕ್ಕೆ ಬಹುಮಾನದ ರೂಪದಲ್ಲಿ ಸಾಹಿತ್ಯ ಪರಿಷತ್ತಿನಿಂದ ಪುಸ್ತಕ, ಕಂಪಾಸ್ ಬಾಕ್ಸ್, ಹಾಗೂ ಸ್ಪರ್ಧಿಸಿದ್ದ ಎಲ್ಲಾ ಮಕ್ಕಳಿಗೂ ಪೆನ್ಸಿಲ್ ವಿತರಿಸಲಾಯಿತು.