ಅಂಕೋಲಾ: ತಾಲೂಕಿನ ಮಂಜಗುಣಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರು ಅರ್ಧಂಬರ್ಧ ನಿರ್ಮಾಣಗೊಂಡಿರುವ ಸೇತುವೆ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಗಂಗಾವಳಿ ನದಿಗೆ ಅಡ್ಡಲಾಗಿ ಮಂಜಗುಣಿಯಿಂದ ಬೊಗರಿಬೈಲ್, ಐಗಳಕೂರ್ವೆ, ಗೋಕರ್ಣಕ್ಕೆ ಸಂಪರ್ಕಿಸುವ ಸೇತುವೆ ಈ ಸೇತುವೆ ಕಾಮಗಾರಿ ಆರಂಭವಾಗಿ 5 ವರ್ಷ ಕಳೆದ್ರೂ ಪೂರ್ಣಗೊಂಡಿಲ್ಲ. ಸೇತುವೆ ನಿರ್ಮಾಣಕ್ಕೆ ನದಿಗೆ ಹಾಕಲಾಗಿದ್ದ ಮಣ್ಣಿನಿಂದ ದೋಣಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದು, ಮಳೆಗಾಲದಲ್ಲಿ ಪ್ರವಾಹಕ್ಕೂ ಕಾರಣವಾಗುತ್ತಿದೆ.
ಸೇತುವೆ ಪೂರ್ಣಗೊಳಿಸುವಂತೆ ಆಗ್ರಹಿಸುತ್ತಿದ್ದರೂ ಜನಪ್ರತಿನಿಧಿಗಳು, ಗುತ್ತಿಗೆದಾರರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಕರವೇ ಅಧ್ಯಕ್ಷ ಭಾಸ್ಕರ ಪಟಗಾರ, ಜೆಡಿಎಸ್ ಮುಖಂಡ ಸೂರಜ ಸೋನಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ದೇವರಭಾವಿ ನೇತೃತ್ವದಲ್ಲಿ ಕಾಮಗಾರಿ ಸ್ಥಳದಲ್ಲಿ ಸೇರಿದ ಜನ, ಕುಮಟಾ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರ ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.