ಕುಮಟಾ: ತಾಲೂಕಿನ ಬಾಡ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಲಕ್ಷ ದೀಪೋತ್ಸವದ ಪ್ರಯುಕ್ತ ನವೆಂಬರ್ 20ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಹಾಗೂ ವಕೀಲ ಆರ್.ಜಿ.ನಾಯ್ಕ ತಿಳಿಸಿದರು.
ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಅಮವಾಸ್ಯೆಯ ನ.23 ರಂದು 5 ಘಂಟೆಯಿಂದ ಕಾಂಚಿಕಾ ದೇವಿಯ ಲಕ್ಷ ದೀಪೋತ್ಸವ ಪ್ರಪ್ರಥಮ ಬಾರಿಗೆ ಅತಿ ವಿಜೃಂಭಣೆಯಿಂದ ನಡೆಯಲಿದ್ದು, ಅದರ ಪ್ರಯುಕ್ತ ನ.20 ರಂದು ಬೆಳಿಗ್ಗೆ ಗಣಪತಿಪೂಜೆ, ಮಹಾ ಸಂಕಲ್ಪ, ಗಣಹವನ, ಮಹಿಳೆಯರಿಂದ ಕುಂಕುಮಾರ್ಚನೆ, ಸಾಯಂಕಾಲ ಅಗ್ನಿಜನನ, ನ.21 ರಂದು ಬೆಳಿಗ್ಗೆ ನವಗ್ರಹ ಶಾಂತಿ, ದುರ್ಗಾಶಾಂತಿ, ಮಹಿಳೆಯರಿಂದ ಕುಂಕುಮಾರ್ಚನೆ, ನ.22 ರಂದು ಬೆಳಿಗ್ಗೆ ಪಂಚದುರ್ಗಾ ಶಾಂತಿಹವನ, ಮಹಾಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಸಾಯಂಕಾಲ ದುರ್ಗಾದೀಪ ನಮಸ್ಕಾರ, ನ.23 ರಂದು ಬೆಳಿಗ್ಗೆ ಫಲಪಂಚಾಮೃತ ಅಭಿಷೇಕ, ಕಲ್ಪೋಕ್ತಪೂಜೆ, ಸಾಯಂಕಾಲ ಲಕ್ಷದೀಪೋತ್ಸವ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಜರುಗಲಿದೆ. ನ.22 ರಂದು ಸಾಯಂಕಾಲ 5 ಘಂಟೆಯಿಂದ ಸಾರ್ವಜನಿಕರಿಗೆ ದೀಪ ನಮಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶ್ರೀದೇವಿಯ ಭಕ್ತರು ಈ ಒಂದು ಸೇವೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಲಕ್ಷ ದೀಪೋತ್ಸವದಲ್ಲಿ ಒಂದು ದೀಪಕ್ಕೆ 10 ರೂ, 5 ದೀಪಕ್ಕೆ 50 ರೂ, 10 ದೀಪಕ್ಕೆ 100 ರೂ, 25 ದೀಪಕ್ಕೆ 240 ರೂ, 50 ದೀಪಕ್ಕೆ 500 ರೂ, 100 ದೀಪಕ್ಕೆ 1000 ರೂ, ನಿಗದಿಪಡಿಸಲಾಗಿದ್ದು, ತುಪ್ಪದ ದೀಪಕ್ಕೆ 50 ರೂ, 500 ಮತ್ತು ಹೆಚ್ಚು ದೀಪ ಸೇವೆ ಮಾಡುವ ಭಕ್ತರಿಗೂ ಅವಕಾಶವಿದೆ. ದೀಪ ಹಾಗೂ ಪಾವತಿ ದೇವಸ್ಥಾನದಲ್ಲಿ ಲಭ್ಯವಿದೆ. ಭಕ್ತಾಧಿಗಳು ಉಗ್ರಾಣದ ಎದುರಿನ ವಿಶೇಷ ಕೌಂಟರ್ ಅಥವಾ ಕಾರ್ಯಕರ್ತರು ಮನೆಗಳಿಗೆ ಬಂದಾಗ ಹಣ ನೀಡಿ ಕೂಪನ್ ಖರೀದಿಸಿ ಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ರಾಘವೇಂದ್ರ ಪಟಗಾರ, ಕಾರ್ಯದರ್ಶಿ ಎಸ್ ಎಸ್ ಹೆಗಡೆ, ಪ್ರಮುಖರಾದ ರತ್ನಾಕರ ನಾಯ್ಕ, ಎಂ ಎಂ ಹೆಗಡೆ, ವಿವೇಕ ಹೆಗಡೆ, ಅನುರಾಧಾ ಭಟ್ಟ, ಭವಾನಿ ಹೆಗಡೆ, ಜಗನ್ನಾಥ ನಾಯ್ಕ, ನಾಗಪ್ಪ ಅಂಬಿಗ, ಪವನ ಗುನಗಾ, ಎಚ್ ಎನ್ ವಿಠ್ಠಲ, ಮೋಹನ ಹರಿಕಂತ್ರ, ಮಂಜುನಾಥ ಹಾಗೂ ಅರ್ಚಕ ಪವನ ಗುನಗಾ ಇತರರಿದ್ದರು.