ಜೊಯಿಡಾ: ಬಿಜಿವಿಎಸ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಗಾಂಗೋಡಾದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ದಿಮೆದಾರರು ಹಾಗೂ ವ್ಯಾಪಾರ ಸಂಘದ ಅಧ್ಯಕ್ಷ ರಫೀಕ್ ಖಾಜಿ ಮಾತನಾಡಿ, ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗಿಯಾಗಿ ತಾವು ಪಡೆದುಕೊಂಡಿರುವ ಅನುಭವ ತಮ್ಮ ಜೀವನಕ್ಕೆ ಅನುಕೂಲವಾಗಲಿ. ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ, ಅದು ನಿಮಗೆ ಸಿಕ್ಕಿರುವುದು ನಿಮ್ಮ ಸೌಭಾಗ್ಯ. ಅದು ನಿರಂತರವಾಗಿ ಸಾಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಗ್ರಾಮೀಣ ಜೀವನ ಕಲಿಸುವುದರ ಜೊತೆಗೆ ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು, ನಾಯಕತ್ವ ಗುಣ ಬೆಳೆಸಿಕೊಂಡು ಜೀವನದಲ್ಲಿ ಅನೇಕ ಕೌಶಲ್ಯಗಳನ್ನು ಪಡೆಯಲು ಸಹಕಾರಿಯಾಗಿದೆ. ಈಗಾಗಲೇ ಈ ಶಿಬಿರ ನಿಮಗೆ ಇಂತಹ ಅನೇಕ ಉಪನ್ಯಾಸಗಳ ಮೂಲಕ ಕೌಶಲ್ಯಗಳನ್ನು ಬೆಳೆಸಿದೆ. ಅದು ಎಂದಿಗೂ ನಿಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಶಾಶ್ವತವಾಗಿ ಉಳಿಯಲಿ ಎಂದು ಹೇಳಿದರು.
ಹರ್ಷಾ ಕಾರ್ಯಕ್ರಮ ನಿರೂಪಿಸಿದರು. ಅಂಕಿತಾ ಮಿರಾಷಿ ಸ್ವಾಗತಿಸಿದರು. ಮನೀಷಾ ಗಾವಡಾ ವಂದಿಸಿದರು. ಸ್ಥಳೀಯರಾದ ಚಂದ್ರಕಾಂತ ದೇಸಾಯಿ, ಗಾಂಗೊಡ ಗ್ರಾಮ ಪಂಚಾಯತಿಯ ಪಿಡಿಒ ನಬೀಲಾಲ್ ಇನಾಮದಾರ, ಉಪನ್ಯಾಸಕರಾದ ಪ್ರವೀಣ್ ನಾಯಕ, ಪ್ರಕಾಶ್ ತಗಡಿನಮನೆ, ಆನಂದು ಗೌಡಾ, ಸರಸ್ವತಿ ನಾಯಕ, ಪಾಂಡುರಂಗ ಪಟಗಾರ, ದತ್ತಾರಾಮ ದೇಸಾಯಿ ಊರಿನ ನಾಗರಿಕರು ಉಪಸ್ಥಿತರಿದ್ದರು.