ಯಲ್ಲಾಪುರ : ಸರಕಾರ ಮೂಲಭೂತ ಸೌಲಭ್ಯ ಗಳ ಅಭಿವೃದ್ಧಿಗೆ ಆಧ್ಯತೆ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಹತ್ತು ಹಲವು ರಸ್ತೆಗಳ ಅಭಿವೃದ್ಧಿ ಕೈಗೊಳ್ಳುವ ಮೂಲಕ ಜನರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಶ್ರಮಿಸುವ ಮೂಲಕ ಅಭಿವೃದ್ಧಿ ಪರ್ವ ಆರಂಭಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ತಾಲೂಕಿನ ಆನಗೋಡ ಗ್ರಾಮ ವ್ಯಾಪ್ತಿಯ ಯಲ್ಲಾರಗದ್ದೆ ಕ್ರಾಸ್ ಬಳಿ ಆನಗೋಡ – ದೇಹಳ್ಳಿ – ಸಾತೋಡ್ಡಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಿಂದೆದೂ ಕಾಣದ ಅಭಿವೃದ್ದಿ ಪರ್ವ ಪ್ರಸ್ತುತ ಸರ್ಕಾರದಲ್ಲಿ ಆಗಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಹಲವು ಆಶ್ವಾಸನೆಗಳನ್ನ ನೀಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾನು ಮಂತ್ರಿಯಾದ ಮೇಲೆ ಆಶ್ವಾಸನೆಗಳನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ರಸ್ತೆ ಸುಧಾರಣೆ, ನೀರಾವರಿ ಯೋಜನೆಗಳಿಗೆ ಅಪಾರ ಅನುಧಾನಗಳನ್ನ ತಂದಿದ್ದೇನೆ. ನೆರೆ ಸಂದರ್ಭದಲ್ಲಿ ಹಾನಿಗೊಳಗಾದ ಪ್ರದೇಶಗಳನ್ನ ಸರಿಪಡಿಸುವ ಕಾರ್ಯವನ್ನ ಸಹ ಮಾಡಲಾಗಿದೆ. ಮುಖ್ಯಮಂತ್ರಿಗಳ ಸಹಕಾರದಿಂದ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಆರಂಭಿಸಲಾಗಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲೂ ಯಲ್ಲಾಪುರ ಹಾಗೂ ಮುಂಡಗೋಡ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ಸೋಲಾರ್ ಆಧಾರಿತ ಡಿಲವರಿ ರೂಮನ್ನ ಮುಂಡಗೋಡ ಮತ್ತು ಯಲ್ಲಾಪುರದಲ್ಲಿ ಮಾತ್ರ ಮಾಡಲಾಗಿದೆ. ಒಂದು ಕಾಲದಲ್ಲಿ ಬಡವರು ಮಾತ್ರ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದರು. ಈಗ ಶ್ರೀಮಂತರು ಸರ್ಕಾರಿ ಆಸ್ಪತ್ರೆ ಬಾಗಿಲಿಗೆ ಹೋಗಿ ನಿಲ್ಲುತ್ತಾರೆ. ಇದಕ್ಕೆ ಕಾರಣ ಕೋವಿಡ್ ನಂತರ ಆಸ್ಪತ್ರೆಗಳಲ್ಲಿ ಆದ ಬಸಲಾವಣೆಯಾಗಿದೆ ಎಂದು ಹೆಬ್ಬಾರ್ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ತನ್ನ ಕ್ಷೇತ್ರದಲ್ಲಿ ಬದಲಾವಣೆಯನ್ನ ತರಲು ಪ್ರಯತ್ನಿಸಿದ್ದೇನೆ. ಅನೇಕ ಬಾಂದಾರಗಳನ್ನ ನಿರ್ಮಿಸಲು ಟೆಂಡರ್ ಕರೆದಿದ್ದು ಇದು ರೈತರ ಬದುಕಿನಲ್ಲಿ ಸುಸ್ತಿರ ಕೊಡುತ್ತದೆ. ಎಲ್ಲಿಯ ವರೆಗೆ ಅನ್ನದಾತ ಸುಭಿಕ್ಷೆ ಆಗುವುದಿಲ್ಲ ಅಲ್ಲಿಯ ವರೆಗ ಯಾವ ನಾಡು ಸುಭೀಕ್ಷೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಲಾಗಿದೆ. ಯಲ್ಲಾಪುರದಲ್ಲಿ ಬಸ್ ನಿಲ್ದಾಣ, ಮಿನಿ ವಿಧಾನಸೌದ ಹೀಗೆ ಹತ್ತು ಹಲವು ಕಾಮಗಾರಿಗಳನ್ನ ಜನರು ನೆನೆಯುವಂತೆ ಮಾಡಿ ತೋರಿಸಲಾಗಿದೆ ಎಂದು ಹೆಬ್ಬಾರ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ವಿವೇಕ್ ಹೆಬ್ಬಾರ್, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ಪ್ರಮುಖರಾದ ಗಣಪತಿ ಮುದ್ದೇಪಾಲ್, ರಾಮಚಂದ್ರ ಚಿಕ್ಯಾನಮನೆ, ನರಸಿಂಹ ಬೋಳಪಾಲ್ ಮುಂತಾದವರು ಭಾಗವಹಿಸಿದ್ದರು.