ಭಟ್ಕಳ: ಇಂದು ಕನ್ನಡ ನಾಡು, ನುಡಿ, ಪರಂಪರೆ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಆಚರಿಸುವ ದಿನವಾಗಿದೆ ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.
ಅವರು ಮಂಗಳವಾರದಂದು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ಕನ್ನಡ ಭಾಷೆಗೆ ಒಂದು ಇತಿಹಾಸವಿದೆ. ಕೇವಲ ಇತಿಹಾಸ, ಮನೋರಂಜನೆ ಮತ್ತು ಆಟಿಕೆಗೆ ಇಟ್ಟ ವಸ್ತುವಲ್ಲ ಎಂದ ಅವರು, ನಮ್ಮ ಭಟ್ಕಳ ನೆಲದ ಗಟ್ಟಿ ಸಂಸ್ಕೃತಿಯನ್ನು ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿಯಲ್ಲಿ ಪರಿಚಯಿಸಿದ ಗೊಂಡ ಸಮಾಜದ ಢಕ್ಕೆ ಕುಣಿತದ ಸದಸ್ಯರಿಗೆ ಅಭಿನಂದಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಮನೆ ಮನಗಳಲ್ಲಿ ಇರಬೇಕಾದ ಕನ್ನಡ ಇಂದು ನಶಿಸಿದೆ. ಇಂದು ಅಡುಗೆ ಮನೆಗೂ ಆಂಗ್ಲ ಭಾಷೆ ಹರಡಿದೆ ಎಂದರು.
ಈ ವೇಳೆ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ನಾಡು- ನುಡಿ ಹಾಗೂ ವೈಶಿಷ್ಟ್ಯತೆ ಬಗ್ಗೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಉಪನ್ಯಾಸ ನೀಡಿದರು. ಇದಕ್ಕೂ ಪೂರ್ವದಲ್ಲಿ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕ ಪೂಜೆ ಸಲ್ಲಿಸಿ ದೀಪ ಬೆಳಗಿ ಶಾಸಕ ಸುನೀಲ ನಾಯ್ಕ ಮೆರವಣಿಗೆಗೆ ಹಸಿರು ನಿಶಾನೆ ತೋರಿದರು. ಮೆರವಣಿಗೆಯುದ್ದಕ್ಕೂ ತಾಲೂಕಿನ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಮನಸೂರೆಗೊಂಡವು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಮಂತ ಬಿ., ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕಾರ ಚಿಕ್ಮನೆ, ಪುರಸಭೆ ಅಧ್ಯಕ್ಷ ಪರ್ವೇಜ್ ಕಾಸಿಂ ಜೀ, ಮುಖ್ಯಾಧಿಕಾರಿ ಸುರೇಶ ಮುಂತಾದವರು ಇದ್ದರು.