ಕಾರವಾರ: ಕೃಷಿಗೆ ಜಿಎಂ ಸಾಸಿವೆ ಲಭ್ಯವಾಗುವಂತೆ ಮಾಡುವ ಒಂದು ಹೆಜ್ಜೆಯಾಗಿ, ಜೆನೆಟಿಕ್ ಇಂಜಿನಿಯರಿಂಗ್ ಪರಿಶೀಲನಾ ಸಮಿತಿಯು ಜೈವಿಕವಾಗಿ ಮಾರ್ಪಾಡಿಸಿದ ಸಾಸಿವೆ ಬೀಜ ಉತ್ಪಾದನೆ ಹಾಗೂ ಪರೀಕ್ಷೆಗೆ ಹಸಿರು ನಿಶಾನೆ ನೀಡಿರುವುದನ್ನು ಅತುರದ ಕ್ರಮ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಕೃಷಿ ಬೆಳವಣಿಗೆ, ಆಹಾರ ಉತ್ಪಾದನೆಯ ಸ್ವಾವಲಂಬನೆ ಹಾಗೂ ರೈತರ ಆದಾಯ ಹೆಚ್ವಿಸಲು ವಿಜ್ಞಾನ ಆಧಾರಿತ ಪರಿಹಾರ ವನ್ನು ಯಾವಾಗಲೂ ಕರ್ನಾಟಕ ಪ್ರಾಂತ ರೈತ ಸಂಘ (KPRS) ಬೆಂಬಲಿಸುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಅನುಭವವು ಇಂತಹ ತಂತ್ರಜ್ಞಾನದ ಪರಿಹಾರವು ರೈತರ, ಗ್ರಾಹಕರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಬದಲು ಕಾರ್ಪೊರೇಟ್ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳನ್ನೇ ಮತ್ತಷ್ಟು ಪ್ರೊತ್ಸಾಹಿಸುತ್ತದೆ. ಹಾಗಾಗಿ ಇಂತಹ ಬೀಜ ತಳಿಗಳ ಸಂಶೋಧನೆಯಲ್ಲಾಗಲಿ ಹಾಗೂ ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳನ್ನು ಹೊರಗಿಡಬೇಕು ಮತ್ತು ಜೈವಿಕ ಪರಿಸರ ಹಾಗೂ ಆರೋಗ್ಯ ಸಂಬಂದಿ ದುಷ್ಪರಿಣಾಮಗಳ ಕುರಿತ ಸಂದೇಹಗಳನ್ನು ವಸ್ತುನಿಷ್ಠ, ಕಠಿಣ ಹಾಗೂ ಪಾರದರ್ಶಕ ವೈಜ್ಞಾನಿಕ ಪುರಾವೆಗಳ ಆಧಾರದಿಂದ ಪರಿಶೀಲಿಸಿ ಸ್ಪಷ್ಟಪಡಿಸಿಕೊಳ್ಳುವ ತನಕ ಯಾವುದೇ ರೀತಿಯಲ್ಲೂ ವಾಣಿಜ್ಯ ಬಳಕೆಗೆ ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.