ಕುಮಟಾ: ಪಟ್ಟಣದಲ್ಲಿ ಹಮ್ಮಿಕೊಂಡ ನುಡಿ ಹಬ್ಬ-2022ರ ಕಾರ್ಯಕ್ರಮದ ನಿಮಿತ್ತ ಮಣಕಿ ಮೈದಾನದ ಪ್ರಧಾನ ದ್ವಾರದೂದ್ದಕ್ಕೂ ಕನ್ನಡಪರ ಮುಖಂಡರು, ವಿವಿಧ ಪಕ್ಷಗಳ ಮುಖಂಡರುಗಳು ಹಾಕಿದ್ದ ಪೋಸ್ಟರ್‌ಗಳನ್ನು ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ತೆರವುಗೊಳಿಸುವ ಮೂಲಕ ಕನ್ನಡಪರ ಮುಖಂಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕುಮಟಾದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಣ್ಣ ಸಣ್ಣ ವಿಚಾರದಲ್ಲೂ ರಾಜಕೀಯ ಕುಚೋದ್ಯಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಣಕಿ ಮೈದಾನದಲ್ಲಿ ನುಡಿ ಹಬ್ಬ-2022 ನ್ನು ಸಂಘಟಿಸಲಾಗಿದೆ. ಇದೊಂದು ಪಕ್ಷಾತೀತ , ಜಾತ್ಯಾತೀತ ಕಾರ್ಯಕ್ರಮವಾಗಿದ್ದರಿಂದ ಎಲ್ಲರ ಸಹಕಾರದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಮಣಕಿ ಮೈದಾನಕ್ಕೆ ಹೊಂದಿಕೊಂಡಿರುವ ಹೆದ್ದಾರಿಯ ಇಕ್ಕೆಲಗಳನ್ನು ಶಾಸಕರ ಸೇರಿದಂತೆ ವಿವಿಧ ಕನ್ನಡಪರ ಮುಖಂಡರು ಮತ್ತು ವಿವಿಧ ಪಕ್ಷಗಳ ಮುಖಂಡರ ಭಾವಚಿತ್ರವಿರುವ ಬೃಹತ್ ಕಟೌಟ್, ಪೋಸ್ಟರ್‌ಗಳನ್ನು ಎರಡುಮೂರು ದಿನಗಳ ಹಿಂದೆ ಅಳವಡಿಸಲಾಗಿತ್ತು. ಆದರೆ ನಿನ್ನೆ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಶಾಸಕರ ಪೋಸ್ಟರ್‌ನ್ನು ಹೊರತು ಪಡಿಸಿ, ಉಳಿದೆಲ್ಲ ಮುಖಂಡರ ಪೋಸ್ಟರ್, ಕಟೌಟ್‌ಗಳನ್ನು ತೆರವುಗೊಳಿಸಿ, ಮೈದಾನದ ಒಂದು ಮೂಲೆಯಲ್ಲಿ ಬೀಸಾಡುವ ಮೂಲಕ ದುಷ್ಕೃತ್ಯವೆಸಗಿದ್ದಾರೆ.
ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕನ್ನಡಪರ ಸಂಘಟನೆಯ ಮುಖಂಡರು, ವಿವಿಧ ಪಕ್ಷದ ಕಾರ್ಯಕರ್ತರು ತಮ್ಮ ಮುಖಂಡರ ಕಟೌಟ್ ಮತ್ತು ಪೋಸ್ಟರ್‌ಗಳು ನಾಪತ್ತೆಯಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಿಡಿಗೇಡಿಗಳು ಇಂಥ ದುಷ್ಕೃತ್ಯ ವೆಸಗುವ ಮೂಲಕ ಕನ್ನಡಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ದುಷ್ಕೃತ್ಯ ವೆಸಗಿದವರನ್ನು ಪೊಲೀಸ್ ಇಲಾಖೆ ತನಿಖೆ ಮೂಲಕ ಬಯಲಿಗೆಳೆದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಅವರು ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗೆ ಒತ್ತಾಯಿಸಿದರು.
ಕರವೇ ಮುಖಂಡರ ಒತ್ತಾಯದ ಮೇರೆಗೆ ತಹಸೀಲ್ದಾರ್ ವಿವೇಕ ಶೇಣ್ವಿ ಅವರು ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ತೆರವುಗೊಳಿಸಿದ ಬ್ಯಾನರ್, ಪೋಸ್ಟರ್‌ಗಳನ್ನು ಮೈದಾನದ ಒಂದು ಮೂಲೆಯಲ್ಲಿ ಬೀಸಾಡಲಾಗಿತ್ತು. ಅಲ್ಲಿಯೂ ತೆರಳಿದ ಪೊಲೀಸ್ ಅಧಿಕಾರಿಗಳು ಆ ಬಗ್ಗೆಯೂ ಪರಿಶೀಲಿಸಿ, ಸೂಕ್ತ ತನಿಖೆಯ ಮೂಲಕ ತಪ್ಪಿದಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ನೀಡಿದರು. ತೆರವುಗೊಳಿಸಲಾದ ಬ್ಯಾನರ್, ಪೋಸ್ಟರ್‌ಗಳ ಮೇಲಿರುವ ಬೆರಳಚ್ಚುಗಳನ್ನು ಆಧರಿಸಿ, ಈ ದುಷಕೃತ್ಯ ವೆಸಗಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಕರವೇ ತಾಲೂಕು ಅಧ್ಯಕ್ಷ ತಿಮ್ಮಣ್ಣ ನಾಯ್ಕ, ಪ್ರಮುಖರಾದ ಜಿ.ಪಿ.ನಾಯ್ಕ, ಬಲೀಂದ್ರ ಗೌಡ, ನಿತ್ಯಾನಂದ ನಾಯ್ಕ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಇದ್ದರು.