ದಾಂಡೇಲಿ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ರವರು ಅಭಿವೃದ್ಧಿಪರ ಚಿಂತನೆ, ದೂರದೃಷ್ಟಿ ವ್ಯಕ್ತಿತ್ವವುಳ್ಳವರಾಗಿದ್ದರು. ಕನ್ನಡ ನಾಡು ನುಡಿಯ ವಿಚಾರದಲ್ಲಿ ಇವರ ಕೊಡುಗೆ ಅಪಾರವಾಗಿದೆ ಎಂದು ದಾಂಡೇಲಿಯ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಹಾಗೂ ಲೇಖಕರಾದ ಡಾ.ಬಿ.ಎನ್.ಅಕ್ಕಿ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಳೆ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಪೋಷಕರಲ್ಲೊಬ್ಬರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿ ಮಾತನಾಡಿದರು.
ಮಿರ್ಜಾ ಇಸ್ಮಾಯಿಲ್‌ರವರು ಕೇವಲ ದಿವಾನರಾಗಿ ಆಡಳಿತ ನೋಡಿಕೊಳ್ಳದೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವದ್ಧಿಯ ಮಹತ್ವಕಾಂಕ್ಷೆಯನ್ನು ಹೊಂದಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಈ ತ್ರಿಮೂರ್ತಿಗಳ ಕೊಡುಗೆಯಿಂದಾಗಿ ಇಂದು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದು ನಿಲ್ಲುವಂತಾಗಿದೆ ಎಂದರು.
ಹಳೆದಾಂಡೇಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರೇಖಾ ಗಾಂವ್ಕರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಮಹಾಪುರುಷರ ಜನ್ಮ ದಿನಾಚರಣೆಯನ್ನು ಆಚರಿಸಿ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಯನ್ನು ಹುಟ್ಟು ಹಾಕುವಂತಹ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಸರ್ ಮಿರ್ಜಾ ಇಸ್ಮಾಯಿಲ್ ರವರು ಕನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಇಂದು ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಇಂತಹ ಇತಿಹಾಸ ಪುರುಷರ ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಸಾಹಿತ್ಯದ ವಿಚಾರಗಳನ್ನು ಕಡೆಗಣಿಸದೆ ಓದಿನ ಜೊತೆಗೆ ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳಬೇಕು. ಸಾಹಿತ್ಯ ಹಲವು ಅನುಭವಗಳನ್ನು ಕೊಡುತ್ತದೆ ಎಂದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆ ಹೊಸೂರ ಸ್ವಾಗತಿಸಿದರು. ಉಪನ್ಯಾಸಕಿ ರಾಧಿಕಾ ಚೋಪಡೆ ಅತಿಥಿಗಳನ್ನು ಪರಿಚಯಿಸಿದರು. ಉಷಾ ಸಾಲ್ಗಾಂವಕರ ವಂದಿಸಿದರು. ಸುಜಾತಾ ನಾಯ್ಕ ನಿರೂಪಿಸಿದರು. ಸುಲೇಮಾನ ಶೇಖ್, ಎನ್.ಆರ್. ನಾಯ್ಕ ಹಾಗೂ ಕಾಲೇಜಿನ ಸಿಬ್ಬಂದಿಗಳು ಸಹಕರಿಸಿದರು. ದಾಂಡೇಲಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ಕೃಷ್ಣಾ ಪಾಟೀಲ್, ತಾಮೀರ್ ಕೋ- ಅಪರೇಟಿವ್ ಬ್ಯಾಂಕಿನ ನಿರ್ದೇಶಕ ಮುಸ್ತಾಕ್ ಅಹ್ಮದ್ ಶೇಖ್, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ ಸಾಂದರ್ಭಿಕವಾಗಿ ಮಾತನಾಡಿದರು. ಕಸಾಪ ದಾಂಡೇಲಿ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ನಗರಸಭಾ ಸದಸ್ಯ ಅನಿಲ್ ನಾಯ್ಕರ ಉಪಸ್ಥಿತರಿದ್ದರು.