ಕಾರವಾರ: ತಾಲ್ಲೂಕಿನ ಮುಡಗೇರಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಸ್ವಾಧೀನಕ್ಕೆ ಒಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ಹೆಚ್ಚುವರಿ ಪರಿಹಾರ ಕೊಡಿಸುವ ಭರವಸೆಯನ್ನು ಶಾಸಕಿ ರೂಪಾಲಿ ಎಸ್.ನಾಯ್ಕ ನೀಡಿದರು.
ಮುಡಗೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಂತ್ರಸ್ತರ ಸಭೆ ನಡೆಸಿದ ಅವರು, ಕೈಗಾರಿಕಾ ಪ್ರದೇಶದಲ್ಲಿ ಮೊದಲ ಹಂತದ 73 ಎಕರೆಯಷ್ಟು ಪ್ರದೇಶದ ಭೂಮಿ ಕಳೆದುಕೊಂಡವರು ಹೆಚ್ಚಿನ ಪರಿಹಾರ ನೀಡಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರು. ಕಳೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಅವರನ್ನು ಭೇಟಿ ಮಾಡಿ ಮುಡಗೇರಿ ಸಂತ್ರಸ್ತರ ಪರವಾಗಿ ಮನವಿಯನ್ನು ಮಾಡಿ, ಹೆಚ್ಚುವರಿ ಪರಿಹಾರ ನೀಡುವಂತೆ ವಿನಂತಿಸಿದ್ದೇನೆ. ಭೂಮಿ ಕಳೆದುಕೊಂಡವರಿಗೆ ನಿರಾಸೆಯಾಗದಂತೆ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದೇನೆ. ಸಚಿವರೂ ಕೂಡ ಈ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ಭೂಮಿ ಕಳೆದುಕೊಂಡವರು ಆತಂಕ ಪಡಬೇಕಿಲ್ಲ. ಹೆಚ್ಚುವರಿ ಪರಿಹಾರದ ನಿಮ್ಮ ಬೇಡಿಕೆಯನ್ನು ಈಡೇರಿಸಲು ನಾನು ಬದ್ಧನಾಗಿದ್ದು, ಈ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.
ಅಧಿಕಾರಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.
2011ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನ ಭೂಮಿ ದರ ನಿರ್ಧಾರಣಾ ಸಮಿತಿ ಸಭೆಯಲ್ಲಿ ಮುಡಗೇರಿ ಸಂತ್ರಸ್ತರಿಗೆ ಎಕರೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಆದರೆ ಈ ದರ ಕಡಿಮೆಯಾಗಲಿದೆ ಎಂದು ರೈತರು ತಿಳಿಸಿದ್ದರು. ನಂತರ ಫೆ.11ರಂದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ ಅವರು ಬೆಂಗಳೂರಿನಲ್ಲಿ ಸಭೆ ನಡೆಸುವ ಭರವಸೆಯನ್ನೂ ನೀಡಿದ್ದರು. ನಂತರ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರನ್ನು ಸೆ.20ರಂದು ವಿಧಾನಸೌಧದಲ್ಲಿ ಭೇಟಿ ಮಾಡಿ ಮುಡಗೇರಿ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ವಿನಂತಿಸಿದಾಗ ಸಚಿವರು ಸ್ಪಂದಿಸಿದ್ದಾರೆ ಎಂದು ರೂಪಾಲಿ ಎಸ್.ನಾಯ್ಕ ತಿಳಿಸಿದರು.