ಶಿರಸಿ: ಜಿಲ್ಲೆಯ ಕೆಲ ತಾಲೂಕಿನಲ್ಲಿ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಸಂಪ್ರದಾಯ ಎಂಬಂತೆ ಗ್ರಾಮ ಒಕ್ಕಲಿಗ ಸಮುದಾಯದಲ್ಲಿ ಬಿಂಗಿ ಕುಣಿತ ಪ್ರಾರಂಭವಾಗಿದ್ದು ಮನೆ ಮನೆಗಳ ಅವರಣದಲ್ಲಿ ಪ್ರದರ್ಶಿಲಾಗುತ್ತಿದೆ.
ಶಿರಸಿ- ಸಿದ್ದಾಪುರ ಭಾಗದಲ್ಲಿರುವ ಗ್ರಾಮ ಒಕ್ಕಲಿಗರು ಎರಡು ದಿನಗಳ ಕಾಲ ಊರೂರು ತಿರುಗಿ ಬಿಂಗಿ ಕುಣಿತ ಮಾಡುವ ಮೂಲಕ ಗಮನ ಸೆಳೆಯುತ್ತಾರೆ.
ಗ್ರಾಮ ಒಕ್ಕಲಿಗ ಸಮುದಾಯದಲ್ಲಿ ಮಾತ್ರ ಬಿಂಗಿ ಕುಣಿತ ವಿಶೇಷವಾಗಿರುತ್ತದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಲೀಂದ್ರನ ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ಪೂಜಿಸಲಾಗುತ್ತದೆ. ಪಾಡ್ಯದ ದಿನ ರಾತ್ರಿ ಬಲಿವೇಂದ್ರನನ್ನು ವಿಸರ್ಜಿಸಿ ಬಿಂಗಿ ಕಟ್ಟುತ್ತಾರೆ. ಆಯಾ ಊರಿನ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿ ಅಲ್ಲಿಂದ ತಂಡ ಹೊರಡುತ್ತದೆ. ಎರಡು ದಿನಗಳ ಕಾಲ ಸಮೀಪದ ಮನೆ ಮನೆಗೆ ತೆರಳಿ ಭಕ್ತಿಗೀತೆ ಹಾಡುತ್ತಾ ತಾಳವನ್ನು ಬಡಿಯುತ್ತಾ ಕುಣಿಯುತ್ತಾರೆ.
ಅನಾದಿಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಪಾಡ್ಯದ ದಿನ ರಾತ್ರಿ ಹೊರಟರೆ ಬಿದಿಗೆ ದಿನ, ರಾತ್ರಿ ಸಂಚಾರ ಮಾಡುತ್ತಾರೆ ತದಿಗೆಯ ದಿನ ರಾತ್ರಿ ವಾಪಸ್ ಬಿಂಗಿಕಟ್ಟಿದ್ದ ದೇವಸ್ಥಾನಕ್ಕೆ ತೆರಳಿ ಸಮಾಪ್ತಿ ಮಾಡುತ್ತಾರೆ. ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಕ್ಕಿ, ಕಾಯಿ, ಅಡುಗೆ ಎಣ್ಣೆ, ಬಟ್ಟೆ ಮೊದಲಾದ ವಸ್ತುಗಳನ್ನು ನೀಡಿ ಗೌರವಿಸುವ ವಾಡಿಕೆ ಬೆಳೆದುಕೊಂಡು ಬಂದಿದೆ.
ಶಿರಸಿ ತಾಲೂಕಿನ ಖೂರ್ಸೆ ಗ್ರಾಮದ ಗ್ರಾಮಸ್ಥರು ಪ್ರಸಕ್ತ ವರ್ಷ ಬಿಂಗಿ ತಂಡಕಟ್ಟಿದ್ದು, ಸ್ಥಳೀಯ ಗ್ರಾಮ ದೇವರಾದ ರಾಮಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಿಸಿದ್ದಾರೆ.