ಕಾರವಾರ: ಜಾಗದ ಕೊರತೆ, ಸ್ಥಳದ ಅಲಭ್ಯತೆಯಂಥ ಸಮಸ್ಯೆಗಳ ಕುರಿತು ಕಾರಣ ನೀಡದೆ ನ.9ರ ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗಾಗಿ ಪ್ರತಿ ತಾಲೂಕಿನ ಕಾಮಗಾರಿಗಳು ಜಾರಿಯಲ್ಲಿ ಇರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ. ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಸ್ಥಳದ ಕೊರತೆ ಇರವುದು ಸರ್ವೇಸಾಮಾನ್ಯ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಪ್ರತಿ ತಾಲೂಕಿನಲ್ಲಿ ನರ್ಸರಿ ಪ್ಲಾಟ್ ಸ್ಥಾಪನೆ, 2022-23ನೇ ಸಾಲಿನ ಕಾಮನ್ ವರ್ಕ್ಶೆಡ್ ಕಾಮಗಾರಿಗಳನ್ನು ಕಾರ್ಯಾರೂಪಕ್ಕೆ ತರಬೇಕು. ಈ ಬಗ್ಗೆ ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದರು.
ಸಭೆಯಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಬಗ್ಗೆ ಪ್ರಸ್ತಾವನೆ ಮಾಡಲಾಯಿತು. ಮಹಿಳೆಯರು ಮಾಡುವ ಗುಡಿ ಕೈಗಾರಿಕೆಗಳ ಬಗ್ಗೆ ಅದರ ಪ್ರಗತಿ ಹಾಗೂ ಅದರ ಅಭಿವೃದ್ಧಿ, ತೆರಿಗೆ ವಸೂಲಿ ಬಗ್ಗೆ ಕೂಡಾ ಚರ್ಚಿಸಲಾಯಿತು. ಇತ್ತೀಚಿಗೆ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ನೀಡಲಾದ ಪಿಒಎಸ್ ಮಶೀನ್‌ಗಳ ಕುರಿತು ಆಗುವ ಸಮಸ್ಯೆಗಳನ್ನು ಬಗೆಹರಿಸುವಂತೆ ಕೆನರಾ ಬ್ಯಾಂಕ್‌ನ ತಾಂತ್ರಿಕ ತಂಡದವರಿಗೆ ತಿಳಿಸಲಾಯಿತು.