ಕಾರವಾರ: ಮುದ್ದೆಬಿಹಾಳ ಶಾಸಕರು ಕನ್ನಡಪ್ರಭ ವರದಿಗಾರರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರಿಗೆ ಮನವಿ ನೀಡಿದರು.
ಮುದ್ದೆಬಿಹಾಳ ತಾಲೂಕಿನ ವರದಿಗಾರ ನಾರಾಯಣ ಮಾಯಾಚಾರಿ ಎನ್ನುವವರು ಕೃಷ್ಣಾ ತೀರದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾದ 19 ಕೋಟಿ ರೂ. ಯೋಜನೆಯ ಕುರಿತು ರಸ್ತೆ ಅನುದಾನ ಬೇರೆಡೆ ವರ್ಗಾವಣೆಗೆ ಖಂಡನೆ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದಕ್ಕೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ವರದಿಗಾರ ನಾರಾಯಣ, ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಇದು ಖಂಡನೀಯವಾಗಿದೆ ಎಂದು ಹೇಳಿದರು.
ಶಾಸಕ ಪಾಟೀಲ್ ನಡಹಳ್ಳಿ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿಯವರು ಅವರ ರಾಜೀನಾಮೆ ಪಡೆಯಬೇಕು. ಈ ಪ್ರಕರಣದಲ್ಲಿ ಸೂಕ್ತ ನ್ಯಾಯ ಸಿಗದೇ ಇದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಸದಾನಂದ ದೇಶಭಂಡಾರಿ, ಪತ್ರಕರ್ತರಾದ ಉದಯ ಭಟ್, ನೀಲಕಂಠ ಬಳೇಗಾರ ಮನವಿ ನೀಡುವ ವೇಳೆ ಇದ್ದರು.