Slide
Slide
Slide
previous arrow
next arrow

ಮರು ತನಿಖೆಗೆ ಆಗ್ರಹಿಸುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ: ತೆಂಗೇರಿ

300x250 AD

ಹೊನ್ನಾವರ: ಪರೇಶ್ ಮೇಸ್ತ ಸಾವು ಸಂಭವಿಸಿ ನಾಲ್ಕೂವರೆ ವರ್ಷ ಕಳೆದಿದ್ದರೂ, ಪರೇಶ್ ಮೇಸ್ತ ಸಾವಿನ ತನಿಖೆ ಎತ್ತ ಸಾಗುತ್ತಿದೆ ಎಂದು ಒಂದು ದಿನವು ವಿಚಾರಿಸದೇ ಬಾಯಿ ಮುಚ್ಚಿ ಕುಳಿತಿದ್ದ ಬಿಜೆಪಿ ಶಾಸಕರು, ಮುಖಂಡರು, ಸಿಬಿಐ ತನ್ನ ತನಿಖಾ ವರದಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸುತ್ತಿದ್ದಂತೆ ಸಿಡಿಲು ಬಡಿದಂತೆ ಎಚ್ಚೆತ್ತು ಮರು ತನಿಖೆಗೆ ಆಗ್ರಹಿಸುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಸಾವಿನ ಪ್ರಕರಣವನ್ನು ತಮ್ಮ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ, ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರವನ್ನು ಗೆದ್ದಿದ್ದರು. ಪರೇಶ್ ಮೇಸ್ತ ಕುಟುಂಬದ ಬಗ್ಗೆ ನಿಜವಾದ ಅನುಕಂಪ ಅಥವಾ ಮಾನವೀಯ ಕಳಕಳಿಯಿದ್ದರೆ, ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಪರೇಶ್ ಮೇಸ್ತ ಕುಟುಂಬಕ್ಕೆ ಪಕ್ಷದ ಟಿಕೇಟ್ ನೀಡಿ, ಶಾಸಕರನ್ನಾಗಿ ಮಾಡಿ, ನಿಜವಾದ ಕಾಳಜಿ ತೋರಿಸಲಿ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ. ಪಕ್ಷ ತನ್ನದೇ ಆಡಳಿತಾವಧಿಯಲ್ಲಿ, ತನ್ನದೇ ಮೋದಿ ಸರಕಾರದ ಅಧೀನದಲ್ಲಿರುವ ಸಿ.ಬಿ.ಐ. ನೀಡಿರುವ ತನಿಖಾ ವರದಿಯನ್ನು ಪ್ರಶ್ನಿಸುತ್ತಿರುವುದು ಅವರ ನೈತಿಕ ದೀವಾಳಿತನಕ್ಕೆ ಹಿಡಿದ ಸಾಕ್ಷಿಯಾಗಿದೆ ಎಂದಿದ್ದಾರೆ. ಪರೇಶ್ ಸಾವು ಸಂಭವಿಸಿ 24 ಗಂಟೆಯೊಳಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿನ ತನಿಖೆಗೆ ಆದೇಶಿಸಿದ್ದರು. ಅದನ್ನು ಸಹಿಸದ ಬಿ.ಜೆ.ಪಿ. ಮುಖಂಡರು, ಕೇವಲ ರಾಜಕೀಯ ದುರುದ್ದೇಶದಿಂದ ತಮಗೆ ಕರ್ನಾಟಕ ಪೊಲೀಸರ ಮೇಲೆ ನಂಬಿಕೆ ಇಲ್ಲಾ, ಸಿ.ಬಿ.ಐ.ಗೆ ಕೊಟ್ಟಲ್ಲಿ ಮಾತ್ರ 24 ಗಂಟೆಯೊಳಗೆ ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಸಾಧ್ಯ ಎಂದು ಜಿಲ್ಲೆಯಾದ್ಯಂತ ಹಿಂಸಾತ್ಮಕವಾಗಿ ಪ್ರತಿಭಟಿಸಿದ್ದರು. ಪ್ರತಿಭಟನಾಕಾರರು ಮತ್ತು ಪರೇಶ್ ಕುಟುಂಬದ ಒತ್ತಾಯದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಸಿಬಿಐಗೆ ನೀಡಿ, ತಮ್ಮ ನಿಜವಾದ ಕಳಕಳಿ ಮೆರೆದಿದ್ದರು. ಸಿಬಿಐ ಸುದೀರ್ಘ ತನಿಖೆ ನಡೆಸಿ, ನಾಲ್ಕುವರೆ ವರ್ಷಗಳ ನಂತರ ಆಕಸ್ಮಿಕ ಸಾವು ಎಂದು ಇತ್ತೀಚೆಗೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ ಬಳಿಕ ಬಿಜೆಪಿ ಶಾಸಕರ ನಿದ್ದೆಗೆಡಿಸಿದೆ. ಈಗ ಪುನಃ ಶಾಸಕರೆಲ್ಲಾ ಸೇರಿ ಮರು ತನಿಖೆ ಅನ್ನುವ ನಾಟಕವನ್ನು ಆರಂಭಿಸಿದ್ದಾರೆ. ಬರುವ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಮರು ತನಿಖೆ ಅನ್ನುವುದು ಕಾಲಹರಣ ಮಾಡಲು ಬಿಜೆಪಿ ಆಯ್ದುಕೊಂಡ ಮಾರ್ಗವಾಗಿದ್ದು, ಜನರನ್ನು ಪದೇ ಪದೇ ಮೂರ್ಖರನ್ನಾಗಿಸಲು, ಜನರ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

300x250 AD

ಮುಖ್ಯಮಂತ್ರಿ ಬೊಮ್ಮಾಯಿಯವರ ನಾಲ್ಕು ತಿಂಗಳ ನಂತರ ಪರೇಶ್ ಸಾವಿನ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು ಅನ್ನುವ ಹೇಳಿಕೆ ತೀರಾ ಬಾಲಿಶತನದ್ದು. ಪರೇಶ್ ಸಾವು ಸಂಭವಿಸಿ ಐದನೇ ದಿನಕ್ಕೆ ಕರ್ನಾಟಕ ಸರಕಾರ ಸಿಬಿಐಗೆ ಹಸ್ತಾಂತರ ಮಾಡಿದ್ದು, ಸರಕಾರದ ಕಡತದಲ್ಲೆ ದಾಖಲಿಸಲ್ಪಟ್ಟಿದೆ. ಅದನ್ನು ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐ ತನ್ನ ಸುಪರ್ದಿಗೆ ಪಡೆದು ಕೊಳ್ಳಲು ಕೆಲ ಸಮಯ ಹಿಡಿದಿರಬಹುದು. ಸಿಬಿಐ ನಿಯಮಾವಳಿ ಮತ್ತು ಅದರ ಪ್ರಕ್ರಿಯೆಯನ್ನೆ ದೊಡ್ಡದು ಮಾಡಿ ಹೇಳಿಕೆ ನೀಡುವುದು ಮುಖ್ಯಮಂತ್ರಿ ಘನತೆಗೆ ಶೋಭೆ ತರುವಂಥದ್ದಲ್ಲ ಎಂದು ತೆಂಗೇರಿ ನುಡಿದಿದ್ದಾರೆ.

ಪರೇಶ್ ಮೇಸ್ತ ಕುಟುಂಬವನ್ನು ಇಂದಿಗೂ ತಮ್ಮ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯವರ ವರ್ತನೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಅನ್ನುವ ರೀತಿಯಲ್ಲಿದ್ದು, ಪರೇಶ್ ಮೇಸ್ತ ಕುಟುಂಬದ ಬಗ್ಗೆ ಬಿಜೆಪಿಗೆ ನಿಜವಾದ ಅನುಕಂಪವಿದ್ದರೆ, ಪುತ್ತೂರಿನ ಪ್ರವೀಣ ನೆಟ್ಟಾರು ಮತ್ತು ಶಿವಮೊಗ್ಗಾದ ಹರ್ಷ ಅವರ ಕುಟುಂಬಕ್ಕೆ ಸರಕಾರ ನೀಡಿದ ತಲಾ 25 ಲಕ್ಷ ರೂಪಾಯಿ ಪರಿಹಾರಧನ ಮತ್ತು ಆ ಎರಡು ಕುಟುಂಬಕ್ಕೆ ನೀಡಿದ ಸರಕಾರಿ ನೌಕರಿ ಮತ್ತು ಉಳಿದ ಎಲ್ಲಾ ಸೌಲತ್ತುಗಳನ್ನು ತಕ್ಷಣ ಪರೇಶ್ ಕುಟುಂಬಕ್ಕೂ ಬಿಜೆಪಿ ಸರಕಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇವೆಲ್ಲವನ್ನೂ ಬಿಟ್ಟು ಬರೇ ಸಾಕ್ಷಿ ನಾಶವಾಗಿದೆ ಎಂದು ಬಿಜೆಪಿಗರು ಹೇಳುವುದರಲ್ಲಿ ಯಾವುದೇ ಹುರುಳಿಲ್ಲ. ಪರೇಶನ ಶವ ಪರೀಕ್ಷೆ ಮತ್ತು ಉಳಿದ ಎಲ್ಲಾ ಪರೀಕ್ಷೆಗಳನ್ನು, ಪರೇಶ ಕುಟುಂಬ ಬಯಸಿದಂತೆ, ಪರೇಶ ಕುಟುಂಬ ಮತ್ತು ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ವಿಡಿಯೊ ಚಿತ್ರಿಕರಣದ ಮೂಲಕ ನಡೆಸಲಾಗಿರುವುದು ಎಲ್ಲರಿಗೂ ತಿಳಿದಿರುವಂತಹದ್ದೆ. ಸಾಕ್ಷಿ ನಾಶವಾಗಿರುವ ಬಗ್ಗೆ ಸಿಬಿಐ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಸಾಕ್ಷಿ ನಾಶ ಅನ್ನುವುದು ಕೊಲೆಯಷ್ಟೇ ಘೋರ ಅಪರಾಧ. ಬಿಜೆಪಿ ದೃಷ್ಟಿಯಲ್ಲಿ ಸಾಕ್ಷಿ ನಾಶವಾಗಿದ್ದರೆ ಅಂಥವರನ್ನು ಗಲ್ಲಿಗೆರಿಸಿ, ಅದನ್ನು ಬಿಟ್ಟು ಬರೇ ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲಾ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಹೇಳಿದ್ದಾರೆ.

Share This
300x250 AD
300x250 AD
300x250 AD
Back to top