ಸಿದ್ದಾಪುರ: ಪಟ್ಟಣದ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಧನ್ವಂತರಿ ಜಯಂತಿಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಧನ್ವಂತರಿ ಹವನವನ್ನು, ವಿದ್ಯುಕ್ತವಾಗಿ ಆಯುರ್ವೆದದ ಸಂದೇಶವನ್ನು ನಿಡುತ್ತೇವೆ. ಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ ಎಂದು ಕಾಲೇಜಿನ ಪ್ರಚಾರ್ಯೆ ಡಾ.ರೂಪಾ ಭಟ್ಟ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಯುರ್ವೇದ ಒಂದು ಜೀವನ ಪದ್ಧತಿಯಾಗಿದೆ. ನಮ್ಮ ಆಹಾರ ವ್ಯವಸ್ಥೆ ಜೀವನ ವಿದಾನವನ್ನು ಬದಲಿಸಿಕೊಂಡರೆ ರೋಗದಿಂದ ಮುಕ್ತಿ ಪಡೆಯಬಹುದು. ಅದಕ್ಕಾಗಿ ಆಹಾರ ಆಯುರ್ವೇದ, ಸಂಪೂರ್ಣ ಆರೋಗ್ಯಕ್ಕೆ ಆಯರ್ವೇದ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಹಾಗೂ ಯುವ ಪೀಳಿಗೆಗೆ ಆಯುರ್ವೇದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಅಲೋಪತಿ ತಜ್ಞ ವೈದ್ಯರನ್ನು ಕರೆಯಿಸಿ ರೋಗ ತಪಾಸಣೆ ಮಾಡಿಸುತ್ತಿದ್ದೇವೆ. ಇದರಿಂದ ನೂರಾರು ಜನರಿಗೆ ಅನುಕೂಲವಾಗಿದೆ. ತಾಲೂಕಿನ 14 ಗ್ರಾಮ ಪಂಚಾಯತಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದೇವೆ. ಉಳಿದ ಪಂಚಾಯತಗಳಲ್ಲೂ ಶಿಬಿರ ನಡೆಸುತ್ತೇವೆ. ಇನ್ನೂ ಹೆಚ್ಚಿನ ಸೇವೆ ನೀಡಲೂ ನಾವು ಸಿದ್ಧರಿದ್ದೇವೆ ಎಂದರು.
ಅಧ್ಯಕ್ಷ ವಿನಾಯಕರಾವ್ ಹೆಗಡೆ ಮಾತನಾಡುತ್ತಾ, ತಾಲೂಕಿನ ಕುಗ್ರಾಮಕ್ಕೂ ತೆರಳಿ ರೋಗ ತಪಾಸಣಾ ಶಿಬಿರವನ್ನು ಉಚಿತವಾಗಿ ನಡೆಸುತ್ತಿರುವುದು ನಮ್ಮ ವಿಶೇಷವಾಗಿದೆ. ಆರೋಗ್ಯ ವಿಮೆ ಕೂಡ ನಮ್ಮ ಆಸ್ಪತ್ರೆಯಲ್ಲಿ ಸ್ವಿಕರಿಸಲಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯೊಂದಿಗೆ ಸೇರಿ ರೋಗ ತಪಾಸಣಾ ಶಿಬಿರ ನಡೆಸುತ್ತಿರುವುದು ಬಹಳ ಜನರಿಗೆ ಉಪಯೋಗವಾಗಿದೆ ಎಂದು ಡಾ.ರಾಘವೇಂದ್ರ ಎಲ್. ಹೇಳಿದರು.