ಸಿದ್ದಾಪುರ: ಅರಣ್ಯ ಅತಿಕ್ರಮಣ ಕಾನೂನಿನ ರೀತಿಯಲ್ಲಿ ಮಂಜೂರಿಯಾಗುವ ಅಗತ್ಯವಿದೆ. ಇದು ಶಿರ್ಸಿ- ಸಿದ್ದಾಪುರ ಕ್ಷೇತ್ರದ ಸಮಸ್ಯೆ ಅಲ್ಲ. ಆ ವಿಚಾರ ನ್ಯಾಯಾಲಯದ ಮುಂದೆ ಇದೆ. ಮೊನ್ನೆಯ ದಿನ ಕಾಂಗ್ರೆಸ್ ಮುಖಂಡರುಗಳು ಮಾಡಿರುವ ಅರಣ್ಯ ಅತಿಕ್ರಮಣ ಹೋರಾಟ ರಾಜಕೀಯ ಪ್ರೇರಿತ. ಅದೊಂದು ಚುನಾವಣೆಯ ಗಿಮಿಕ್ ಎಂದು ಬಿಜೆಪಿ ಪ್ರಮುಖ ರವಿ ಹೆಗಡೆ ಹೂವಿನಮನೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಅತಿಕ್ರಮಣದಾರರಿಗೆ ರಾಜಕೀಯೇತರ ಪರಿಹಾರದ ಅಗತ್ಯವಿದೆ. ಅರಣ್ಯ ಒತ್ತುವರಿ ಮಾಡಿದವರಿಗೆ ಸಕ್ರಮಗೊಳಿಸುವ ಪ್ರಕ್ರಿಯೆ ಸಮರ್ಪಕವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ರೀತಿಯಾಗಿ ರಸ್ತೆಗಿಳಿದು ಹೋರಾಟ ಮಾಡುವುದರಿಂದ ನ್ಯಾಯಾಲಯಕ್ಕೆ ಯಾವುದೇ ಸಂದೇಶ ಹೋಗುವುದಿಲ್ಲ. ಅವರಿಗೆ ನ್ಯಾಯ ಕೊಡಿಸಲು ಯಾವುದೇ ಸಹಾಯವಾಗುವುದಿಲ್ಲ, ಮತ್ತಷ್ಟು ಝಟಿಲಗೊಳ್ಳುತ್ತದೆ. ಸ್ಥಳೀಯ ಶಾಸಕರು ವಿಧಾನಸಭಾ ಅಧ್ಯಕ್ಷರು ಇರುವುದರಿಂದ ದೊಡ್ಡಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದು ನ್ಯಾಯಾಲಯಕ್ಕೆ ಆಫಿಡಾವಡಟ್ ಸಲ್ಲಿಸುವುದಕ್ಕೆ ಸೂಚನೆ ನೀಡಿದ್ದಾರೆ. ಇದರಿಂದ ಪರಿಣಾಮಕಾರಿಯಾಗುತ್ತದೆ ಎನ್ನುವ ವಿಶ್ವಾಸ ನಮಗೆಲ್ಲರಿಗೂ ಇದೆ. ಅತಿಕ್ರಮಣದಾರರಿಗೆ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡೋಣ ಎಂದರು.
ಈಗ ಹೋರಾಟ ಮಾಡುವ ಕಾಂಗ್ರೆಸ್ ನಾಯಕರುಗಳು ಅವರ ಸರ್ಕಾರ ಇದ್ದಾಗ ಹಿಂದಿನ ಅವಧಿಯಲ್ಲಿ ಏನು ಮಾಡಿದ್ದಾರೆ. ಅವರು ಅತಿಕ್ರಮಣದಾರರಿಗೆ ನ್ಯಾಯ ಕೊಡುವಂತಹ ಕೆಲಸ ಮಾಡಬಹುದಿತ್ತಲ್ಲ. ಈಗ ಜನರನ್ನು ಈ ರೀತಿ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೋ ಪಕ್ಷಾತೀತವಾಗಿ ಕಾನೂನಿನ ಚೌಕಟ್ಟಿನೊಳಗೆ ಮಂಜೂರಾಗುವ ರೀತಿಯಲ್ಲಿ ಶ್ರಮಿಸೋಣ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರುರಾಜ ಶಾನಭಾಗ್ ಮಾತನಾಡಿ, ಹಳೆಯ ಅತಿಕ್ರಮಣ ಜಾಗದಲ್ಲಿ ಕೃಷಿ ಅಥವಾ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವವರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಏನಾದರೂ ತೊಂದರೆಯಾದರೆ ನಮ್ಮನ್ನು ಸಂಪರ್ಕಿಸಿ. ನಾವು ಸಭಾಧ್ಯಕ್ಷರಿಗೆ ಮಾತನಾಡಿ ನಿಮಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಪಟ್ಟಣ ಪಂಚಾಯತ ಸದಸ್ಯರುಗಳಾದ ಮಾರುತಿ ಟಿ.ನಾಯ್ಕ, ನಂದನ್ ಬೋರ್ಕರ್, ಸುರೇಶ್ ನಾಯ್ಕ ಬಾಲಿಕೊಪ್ಪ, ರಾಜೇಂದ್ರ ಕಿಂದ್ರಿ, ಮಂಜುನಾಥ ಭಟ್, ಪ್ರಮುಖರಾದ ತಿಮ್ಮಪ್ಪ ಎಂ.ಕೆ., ವಿಜೇತ ಗೌಡರ್, ಎ.ಜಿ.ನಾಯ್ಕ ಕಡಕೇರಿ, ರಾಜು ನಾಯ್ಕ ಅವರಗುಪ್ಪ, ತೋಟಪ್ಪ ನಾಯ್ಕ ಹೊಸೂರು, ಕೃಷ್ಣಮೂರ್ತಿ ನಾಯ್ಕ ನೀಡಗೋಡ, ಕೃಷ್ಣಮೂರ್ತಿ ನಾಯ್ಕ ಐಸೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.