ಕಾರವಾರ: ಕ್ಷೇತ್ರದಲ್ಲಿ ಹೆಚ್ಚಿದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದರೆ ಕೆಲ ಮಹಿಳೆಯರಿಂದ ಶಾಸಕಿ ರೂಪಾಲಿ ನಾಯ್ಕ ಅವರು ಪ್ರಕಟಣೆ ಕೊಡಿಸುತ್ತಾರೆ. ಭ್ರಷ್ಟಾಚಾರಕ್ಕೂ ಮಹಿಳೆಗೂ ಏನು ಸಂಬಂಧ ಎನ್ನುವುದು ಕಾರವಾರ- ಅಂಕೋಲಾ ಕ್ಷೇತ್ರದ ಜನತೆಗೆ ತಿಳಿದಿದೆ ಎಂದು ಆನಂದ್ ಅಸ್ನೋಟಿಕರ್ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. 40 ಪರ್ಸೆಂಟ್ ಆರೋಪ ಕಾರವಾರದಿಂದಲೇ ಪ್ರಾರಂಭವಾಗಿ ಇಡೀ ರಾಜ್ಯ ಸರ್ಕಾರದ ಹೆಸರನ್ನೇ ಕೆಡಿಸಿದೆ. ಗುತ್ತಿಗೆದಾರರಿಗೆ ಕೆಲಸ ಇಲ್ಲದೇ ಪರದಾಡುತ್ತಿದ್ದು, ಇತಿಹಾಸದಲ್ಲೇ ಮೊದಲು ಎನ್ನುವಂತೆ ಕ್ಷೇತ್ರದ ಬಹುತೇಕ ಎಲ್ಲಾ ಗುತ್ತಿಗೆದಾರರು ಬೀದಿಗೆ ಇಳಿದು ಶಾಸಕರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಐದು ವರ್ಷಗಳ ಕಾಲ ಶಾಸಕರಾಗಿ ಅಭಿವೃದ್ದಿ ಮಾಡಿ ಎಂದರೆ, ಅದನ್ನ ಬಿಟ್ಟು ತನ್ನ ಅಭಿವೃದ್ದಿಯನ್ನ ಮಾಡಿಕೊಂಡ ಶಾಸಕರ ಬಗ್ಗೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಧ್ವನಿ ಎತ್ತಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತಿದರೆ ಅವರ ವಿರುದ್ಧ ಮಹಿಳೆ ಎನ್ನುವ ಪದವನ್ನ ಬಳಸಿ ರಾಜಕೀಯ ಮಾಡಲು ಶಾಸಕರು ಮುಂದಾಗಿದ್ದು ಇದು ಬುದ್ದಿವಂತ ಕ್ಷೇತ್ರವಾದ ಕಾರವಾರ ಕ್ಷೇತ್ರದ ಜನರಿಗೆ ತಿಳಿಯುತ್ತದೆ.
ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತ ತಕ್ಷಣ ಜನರು ತಿರಸ್ಕಾರ ಮಾಡಿದ್ದಾರೆ ಎನ್ನುವುದಾದರೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಪಕ್ಷೇತರವಾಗಿ ಸ್ಪರ್ಧಿಸಿ ಸೋಲನ್ನ ಕಂಡ ಕಾರವಾರದ ಹಾಲಿ ಶಾಸಕಿ ರೂಪಾಲಿ ನಾಯ್ಕ ಮತ್ತೆ ಆಯ್ಕೆಯಾಗಲಿಲ್ಲವೇ. ಪಕ್ಷಕ್ಕೆ ದ್ರೋಹ ಮಾಡಿ ಈಗ ತಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತೆ ಎಂದು ಹೇಳಿಕೊಂಡರೇ ಜನರು ನಂಬುತ್ತಾರಾ? ಆನಂದ್ ಅಸ್ನೋಟಿಕರ್ ಜೆಡಿಎಸ್‌ನಿಂದ ಸ್ಪರ್ಧಿಸಿ 47 ಸಾವಿರ ಮತ ಪಡೆದಿದ್ದರು. ಅದು ಅಸ್ನೋಟಿಕರ್ ಕುಟುಂಬದ ಶಕ್ತಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಶಾಸಕರು ಬಿಜೆಪಿ ಅನ್ನುವ ಪಕ್ಷ ಬಿಟ್ಟು ನಿಲ್ಲಲಿ ಸಾವಿರ ಓಟು ಬೀಳುವುದಿಲ್ಲ. ತನ್ನ ಸ್ವಂತ ಪಕ್ಷದ ನಾಯಕರ ವಿರುದ್ಧ ಪಿತೂರಿ ಮಾಡಿದಂತೆ ಎದುರಾಳಿಯಾಗಿರುವ ಆನಂದ್ ಅಸ್ನೋಟಿಕರ್ ಮೇಲೆ ಮಾಡಲು ಹೊರಟರೆ ಜನರು ನಂಬುವುದಿಲ್ಲ.
ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಯಾವೆಲ್ಲಾ ಉಪಯೋಗ ಆಗಿದೆ ಎನ್ನುವುದು ನಾವು ಹೇಳುವುದಕ್ಕಿಂತ ಕಾರ್ಯಕರ್ತರ ಬಾಯಲ್ಲಿಯೇ ಎಲ್ಲವೂ ಬರುತ್ತದೆ. ಕಾರ್ಯಕರ್ತರಿಗೆ ದೊರಕಬೇಕಾಗಿದ್ದ ಕೆಡಿಎ ಅಧ್ಯಕ್ಷ ಸ್ಥಾನವನ್ನ ಕೊಡಿಸದೇ ಅಧಿಕಾವರನ್ನೇ ಮುಗಿಸಿದ ಖ್ಯಾತಿ ಶಾಸಕರದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ. ಕೇವಲ ಚುನಾವಣೆಯಲ್ಲಿ ಪಕ್ಷಕ್ಕಾಗಿ ನಿಷ್ಟವಂತರಾಗಿ ದುಡಿದವರನ್ನ ಬಳಸಿಕೊಂಡು ನಂತರ ಹಣ ಮಾಡಲು ತಮ್ಮೊಟ್ಟಿಗೆ ತಂಡವೊಂದನ್ನ ಕಟ್ಟಿಕೊಂಡು ಕಾರ್ಯಕರ್ತರನ್ನ ಮೂಲೆ ಗುಂಪು ಮಾಡಿದ್ದು ಇಡೀ ಕ್ಷೇತ್ರದ ಜನರೇ ಮಾತನಾಡಿಕೊಳ್ಳುತ್ತಾರೆ. ತಾನು ಮಹಿಳೆ ಎಂದು ಬೇರೆಯವರ ಕೈನಲ್ಲಿ ಆನಂದ್ ಅಸ್ನೋಟಿಕರ್ ವಿರುದ್ಧ ಪ್ರಕಟಣೆ ನೀಡುವ ಶಾಸಕರು ತಾವು ಗೆದ್ದ ನಂತರ ಮಹಿಳೆಯರಿಗಾಗಿಯೇ ಎಂದು ವಿಶೇಷ ಯಾವ ಯೋಜನೆ ತಂದಿದ್ದಾರೆ, ಸದನದಲ್ಲಿ ಮಹಿಳೆಯರ ಪರ ಯಾವಾಗ ಧ್ವನಿ ಎತ್ತಿದ್ದಾರೆ, ಮಹಿಳೆಯರ ಮೇಲೆ ಆದ ಅನ್ಯಾಯದ ವಿರುದ್ಧ ಎಂದಾದರು ಧ್ವನಿ ಎತ್ತಿದ್ದಾರಾ, ಕಳೆದ ಬಾರಿ ಮಹಿಳಾ ಸಂಘಗಳ ಸಾಲ ಮನ್ನ ಮಾಡಿಸುವುದಾಗಿ ಹೇಳಿ ಏನು ಮಾಡಿದ್ದಾರೆ, ರಾಜಕಾರಣಕ್ಕಾಗಿ ಮಾತ್ರ ಮಹಿಳೆ ಅನ್ನೋ ಪದ ಬಳಸಿಕೊಂಡರೇ ಎಲ್ಲಾ ಜನರು ನಂಬುತ್ತಾರಾ.?
ಆನಂದ್ ಅಸ್ನೋಟಿಕರ್ ಅವರು ಮಾಡಿದ ಆರೋಪಕ್ಕೆ ರಾಜಕೀಯವಾಗಿಯೇ ಎದುರಿಸುವ ಧೈರ್ಯವಿದ್ದರೇ ಶಾಸಕರು ನೇರವಾಗಿಯೇ ಅವರ ವಿರುದ್ಧ ಹೇಳಿಕೆ ಕೊಡಲಿ. ಅದಕ್ಕೆ ಆನಂದ್ ಅಸ್ನೋಟಿಕರ್ ಸಹ ಉತ್ತರಿಸಲು ಸಿದ್ದರಿದ್ದಾರೆ. ಅದನ್ನ ಬಿಟ್ಟು ಯಾರಿಗೂ ತಿಳಿಯದಂತೆ ಪ್ರಕಟಣೆಯನ್ನ ತಾವೇ ಮಾಡಿಸಿಕೊಂಡು, ಮಹಿಳೆಯರ ಹೆಸರಿನಲ್ಲಿ ಪತ್ರಿಕೆಗಳಿಗೆ ನೀಡಿದರೆ ಜನರಿಗೆ ಯಾರು ಏನೆಂದು ತಿಳಿಯುತ್ತದೆ. ಆನಂದ್ ಅಸ್ನೋಟಿಕರ್ ಅವರಿಗೆ ಕ್ಷೇತ್ರದ ಮಹಿಳೆಯರ ಮೇಲೆ ಅಪಾರ ಗೌರವವಿದೆ. ಸಣ್ಣ ಮಟ್ಟದ ರಾಜಕಾರಣ ಮಾಡಲು ಹೊರಟರೆ ಇದಕ್ಕೆ ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಉತ್ತರವನ್ನ ಕೊಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಜನತಾದಳ ಮಹಿಳಾ ಪ್ರಧಾನ ಕಾರ್ಯದರ್ಶಿ ಮೋಹಿನಿ ಗೌಡ, ರುಕ್ಮಿಣಿ ಗೌಡ, ಸುಜಾತಾ ನಾಯ್ಕ, ಮಂಗಲಾನಾಯ್ಕ, ಜಯಶ್ರೀ ಗೌಡ, ಶೋಭಾ ಬಂಟ್ ತಿಳಿಸಿದ್ದಾರೆ.