ಶಿರಸಿ: ಕೇಂದ್ರ ಆಯುಷ್ ಸಚಿವಾಲಯವು ಸೂಚಿಸಿರುವ 2022ನೇ ಸಾಲಿನ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪೂರ್ವಭಾವಿಯಾಗಿ ಭೈರುಂಬೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಬಾರಿಯ ಘೋಷವಾಕ್ಯವಾದ ‘ಪ್ರತಿದಿನ ಪ್ರತಿ ಮನೆಯಲ್ಲೂ ಆಯುರ್ವೇದ’ ಎಂಬುವುದರ ಬಗ್ಗೆ ಆರೋಗ್ಯ ಆನಂದ ಆಯುಷ್ಯ ಹೆಚ್ಚಿಸುವಲ್ಲಿ ಆಯುರ್ವೇದ ಪಾತ್ರ ಹಾಗೂ ಆಯುಷ್ ಕಾರ್ಯಕ್ರಮವನ್ನು ಸಾವಿರಾರು ಜನರಿಗೆ ನೀಡಲಾಗಿದೆ. ಹಲವಾರು ಸಂಘ- ಸಂಸ್ಥೆಗಳು, ಸ್ತ್ರೀಶಕ್ತಿ ಸಂಘಗಳು, ಶಾಲೆಗಳು, ಪ್ರೌಢಶಾಲೆ- ಕಾಲೇಜುಗಳಲ್ಲಿ ಇದುವರೆಗೆ ಆಯುರ್ವೇದದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಪೂರ್ಣಿಮಾ ಎಸ್.ಬಿ. ತಿಳಿಸಿದ್ದಾರೆ.
ಶಿರಸಿಯ ಜೆಎಂಜೆ ಕಾಲೇಜು, ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜು, ಭೈರುಂಬೆ ಗ್ರಾಮೀಣ ಮಹಿಳಾ ವೇದಿಕೆ, ಕೃಷಿ ವಿಜ್ಞಾನ ಕೇಂದ್ರ, ಸುಯೋಗ ವೃದ್ಧಾಶ್ರಮ, ಶ್ರೀ ಮಾರಿಕಾಂಬ ದೇವಸ್ಥಾನ, ಸೇವಾ ಸಿಂಚನ ಟ್ರಸ್ಟ್, ಪೇರಲ ಕುಂಬ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರುಣೋದಯ ಟ್ರಸ್ಟ್, ಭೈರುಂಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾರದಾಂಬ ಪ್ರೌಢಶಾಲೆ, ಸೃಷ್ಟಿ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯತಿ ಸದಾಶಿವಹಳ್ಳಿ, ಭೈರುಂಬೆ ಸೃಷ್ಟಿ ಸಂಜೀವಿನಿ ಒಕ್ಕೂಟಗಳಲ್ಲಿ ಭೈರುಂಬೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಿಂದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಲ್ಲರಿಗೂ ಆಹಾರ ಸೇವನೆಯ ವಿಧಿ ವಿಧಾನ ದಿನಚರ್ಯ, ಋತುಚರ್ಯ, ವಿರುದ್ಧ ಆಹಾರದ ಬಗ್ಗೆ ಮಾಹಿತಿ, ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ತೊಂದರೆ- ಪಿಸಿಓಡಿಯ ಬಗ್ಗೆ ವಿವರಣೆ ನೀಡಲಾಯಿತು. ಕೊನೆಯಲ್ಲಿ ಅವಶ್ಯವಿರುವವರಿಗೆ ಆರೋಗ್ಯ ತಪಾಸಣೆ ಮಾಡಿ ರೋಗ ನಿರೋಧಕ ಔಷಧವನ್ನು ಹಾಗೂ ಆಯುಷ್ ಮಾಹಿತಿಯುಳ್ಳ ಕರಪತ್ರಿಕೆಯನ್ನು ನೀಡಲಾಗಿದೆ.