ಶಿರಸಿ: ಎಸ್‌ಎಫ್‌ಸಿ ಅನುದಾನದಲ್ಲಿ ಮಂಜೂರಿಯಾಗಿರುವ ಮೇಲ್ಮಟ್ಟದ ಜಲ ಸಂಗ್ರಹಗಾರವನ್ನು ಈಗಾಗಲೇ ನಿಗದಿಪಡಿಸಿದಂತೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿಯೇ ನಿರ್ಮಿಸಲು ನಗರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸುಧಾರಣೆಯ ಬಗ್ಗೆ 2021ನೇ ಸಾಲಿನ ಎಸ್‌ಎಫ್‌ಸಿ 10 ಕೋಟಿ ರೂ. ವಿಶೇಷ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಅದ್ಯಕ್ಚರು ಜಲ ಸಂಗ್ರಹಗಾರ ನಿರ್ಮಿಸಲು ಮೊದಲೇ ನಿಗದಿ ಪಡಿಸಿದ ಜಾಗದಲ್ಕಿ ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಜಲ ಸಂಗ್ರಹಗಾರಕ್ಕೆ ಆಸ್ಪತ್ರೆಯ ಮುಂಭಾಗದಲ್ಲಿರುವ ಹನುಮಾನ ವ್ಯಾಯಾಮ ಶಾಲೆಯಲ್ಲಿ ಕಟ್ಟಲು ಜಿಲ್ಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ ಎಂದರು.
ಇದರಿಂದ ಆಕ್ರೋಶಭರಿತರಾದ ಸದಸ್ಯರುಗಳಾದ ದಯಾನಂದ ನಾಯ್ಕ ಹಾಗೂ ಪ್ರದೀಪ ಶೆಟ್ಟಿಯವರು ಆಸ್ಪತ್ರೆ ನಿರ್ಮಾಣಕ್ಕೆ ನಗರಸಭೆಯಿಂದ ಒಂದು ಎಕರೆ ಜಾಗ ನೀಡಿರುವುದರಿಂದ ನಾವು ಆಸ್ಪತ್ರೆಯ ಆವರಣದಲ್ಲಿಯೇ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಟ್ಯಾಂಕ್ ಅನ್ನು ಕಟ್ಟಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಅಧ್ಯಕ್ಷರು ಟ್ಯಾಂಕ್ ಜಾಗ ಬದಲಾಗುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಿದರೂ ಅವರ ಮಾತಿಗೆ ಜಗ್ಗದ ಸದಸ್ಯರು, ಹನುಮಾನ ವ್ಯಾಯಾಮ ಶಾಲೆಯ ಜಾಗ ಸಿಗುವ ಬಗ್ಗೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದ 11 ವಾರ್ಡ್ಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವ ಟ್ಯಾಂಕ್ ಅನ್ನು ಮೊದಲು ನಿಗದಿಪಡಿಸಿದ ಜಾಗದಲ್ಲಿಯೇ ನಿರ್ಮಿಸಬೇಕೆಂದು ಬಿಗಿಪಟ್ಟು ಹಿಡಿದರು. ಇದರಿಂದಾಗಿ ಅಧ್ಯಕ್ಷರು ಸದಸ್ಯರ ಮಾತಿಗೆ ಸಮ್ಮತಿ ಸೂಚಿಸಿ ಆಸ್ಪತ್ರೆಯ ಆವರಣದಲ್ಲಿಯೇ ಟ್ಯಾಂಕ್ ನಿರ್ಮಿಸಲು ಒಪ್ಪಿಗೆ ನೀಡಿದರು. ಹಳೆ ಸರಕಾರಿ ಆಸ್ಪತ್ರೆಯಿಂದ ಹಾದು ಹೋಗಿರುವ ಪೈಪ್ ಲೈನ್ ಸ್ಥಳಾಂತರಿಸಲು ನಗರಸಭೆಯಿಂದ ಎಂಜಿನಿಯರಿಂಗ್ ವಿಭಾಗಕ್ಕೆ 70 ಲಕ್ಷ ರೂ. ನೀಡಲು ಅಧ್ಯಕ್ಷರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸರ್ವ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.
ಸದಸ್ಯ ಶ್ರೀಕಾಂತ ತಾರೆಬಾಗಿಲ ಮಾತನಾಡಿ, ಕುಡಿಯುವ ನೀರಿಗಾಗಿಯೇ 21 ಕೋಟಿ ರೂ. ಮಂಜೂರಿಯಾಗಿರುವಾಗ ಪೈಪ್ ಲೈನ್ ಸ್ಥಳಾಂತರಕ್ಕೆ ನಗರಸಭೆಯಿಂದ ಏಕೆ ಹಣ ನೀಡಬೇಕೆಂದು ಪ್ರಶ್ನಿಸಿದರು. ಇವರ ಮಾತಿಗೆ ಸದಸ್ಯರೆಲ್ಲರೂ ಧ್ವನಿಗೂಡಿಸಿದರು. ಆದರೆ ಕುಡಿಯುವ ನೀರಿನ ಹಿತದೃಷ್ಟಿಯಿಂದ ಸದಸ್ಯರು 70 ಲಕ್ಷ ರೂ. ನೀಡಲು ಒಪ್ಪಿಗೆ ಸೂಚಿಸಿದರಾದರೂ ಕಾಮಗಾರಿ ಕುಡಿಯುವ ನೀರಿನ ಕಾಮಗಾರಿ ನಿಯಂತ್ರಣ ನಗರಸಭೆಯ ಕೈಯಲ್ಲಿರಬೇಕು. ನಗರಸಭೆಯ ಇಂಜಿನಿಯರ್ ಮಾರ್ಗದರ್ಶನದಲ್ಲಿಯೇ ಕಾಮಗಾರಿ ನಡೆಸಬೇಕೆಂದು ಠರಾವು ಮಾಡಲು ಸೂಚಿಸಿದ್ದರಿಂದ ಇದಕ್ಕೆ ಅಧ್ಯಕ್ಷರು ಒಪ್ಪಿಗೆ ನೀಡಿದರು. ನಗರದಲ್ಲಿ ಬಿಡಾಡಿ ನಾಯಿಗಳ ನಿಯಂತ್ರಣ ಬಗ್ಗೆ ರಮಾಕಾಂತ ಭಟ್ ಗಂಭೀರವಾಗಿ ಚರ್ಚೆ ನಡೆಸಿದರು.
ಇದಕ್ಕೆ ಎಲ್ಲಾ ಸದಸ್ಯರು ಅಧ್ಯಕ್ಷರ ಮೇಲೆ ಒತ್ತಡ ಹಾಕಿ ನಾಯಿಗಳ ನಿಯಂತ್ರಣಕ್ಕೆ ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದರು. ಇದಕ್ಕೆ ಪೌರಾಯುಕ್ತ ಕೇಶವ ಚೌಗುಲೆ ನಾಯಿಗಳ ನಿಯಂತ್ರಣಕ್ಕೆ ಈಗಾಗಲೇ ನಗರಸಭೆ ಕ್ರಮ ಕೈಗೊಂಡಿದೆ ಎಂದರು. ಬಿಡಾಡಿ ದನಗಳನ್ನು ಕೊಂಡವಾಡಿಗೆ ಸಾಗಿಸಲು ವಾಹನ ಖರೀದಿಸುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್ ಪ್ರಸ್ತಾಪ ಮಾಡಿ, ವಾಹನದ ಅವಶ್ಯಕತೆಯ ಬಗ್ಗೆ ವಿವರಿಸಿದರು. ಇದಕ್ಕೆ ಸದಸ್ಯರು ವಾಹನ ಖರೀದಿಗೆ ಒಪ್ಪಿಗೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ವೀಣಾ ಶೆಟ್ಟಿ ಇದ್ದರು.