ಹಳಿಯಾಳ: ರೈತರ ಕಬ್ಬಿಗೆ ಉತ್ತಮ ದರ, ಕಟಾವು ಮತ್ತು ಸಾಗಾಟ ವೆಚ್ಚ ಕಡಿತ, ಹಳೆ ಬಾಕಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಆಡಳಿತ ಸೌಧದ ಎದುರು ಕಬ್ಬು ಬೆಳೆಗಾರ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಗುರುವಾರ 23 ದಿನ ಪೂರೈಸಿದೆ.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗುರುವಾರ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ, ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕುವವರೆಗೂ ಆಡಳಿತ ಸೌಧದ ಎದುರು ಪ್ರತಿಭಟನೆ ನಿಲ್ಲುವುದಿಲ್ಲ. ಶುಕ್ರವಾರದಿಂದ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲು ಹಳಿಯಾಳದ ಆಡಳಿತ ಸೌಧದ ಎದುರೇ ತೀರ್ಮಾನಿಸಲಾಗುವುದು. ಶುಕ್ರವಾರ ಪಟ್ಟಣದ ಆಡಳಿತ ಸೌಧದ ಎದುರು ಎಲ್ಲ ರೈತ ಬಾಂಧವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಕರೆ ನೀಡಲಾಗಿದೆ ಎಂದು ಬೋಬಾಟಿ ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಮ್.ವಿ.ಘಾಡಿ, ಶಂಕರ ಕಾಜಗಾರ, ಬಸವರಾಜ ಬೆಂಡಿಗೇರಿ, ಮಂಜುಳಾ ಗೌಡಾ, ಅಪ್ಪಾರಾವ ಪೂಜಾರಿ, ಬಳಿರಾಮ ಮೊರೆ, ಅಪ್ಪಾಜಿ ಶಹಾಪುರಕರ ಮೊದಲಾದವರು ಇದ್ದರು.