ಕುಮಟಾ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ಆಶ್ರಯದಲ್ಲಿ ಅ.28ರಿಂದ ನ.3ರವರೆಗೆ ತಾಲೂಕಿನ ಹೊಳೆಗದ್ದೆ ಟೋಲ್ ಸಮೀಪದ ಗೋಗ್ರೀನ್ ಮೈದಾನದಲ್ಲಿ ಕಲಾಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕರು ಹಾಗೂ ಕಲಾವಿದರಾದ ನೀಲ್ಕೋಡ್ ಶಂಕರ ಹೆಗಡೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ, ತಾಳಮದ್ದಳೆ ಹಾಗೂ ಪ್ರಶಸ್ತಿ ಪ್ರದಾನದ ಈ ಕಾರ್ಯಕ್ರಮದಲ್ಲಿ ಹಿರಿಯ ಸ್ತ್ರೀ ವೇಷಧಾರಿಗಳಾದ ಎಂ.ಎ.ನಾಯ್ಕ ಮಂದಾರ್ಥಿ ಅವರಿಗೆ ಅಭಿನೇತ್ರಿ ಪ್ರಶಸ್ತಿ, ಯಕ್ಷಗಾನದ ಸವ್ಯಸಾಚಿ ವೇಷಧಾರಿ ಅಶೋಕ ಭಟ್ ಸಿದ್ದಾಪುರ ಇವರಿಗೆ ಬಿಳಿಯೂರು ಕೃಷ್ಣಮೂರ್ತಿ ಪ್ರಶಸ್ತಿ, ಸೆಳೆಮಿಂಚಿನ ಪುಂಡುವೇಷಧಾರಿ ಕೊಳಲಿ ಕೃಷ್ಣ ಶೆಟ್ಟಿಗೆ ಕಣ್ಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಅ.28ರಂದು ಸಂಜೆ 5 ಗಂಟೆಯಿಂದ ಭೀಷ್ಮವಸಾನ ತಾಳಮದ್ದಲೆ, 29ರಂದು ಸಂಜೆ 5.30ರಿಂದ ಗದಾಯುದ್ಧ ಯಕ್ಷಗಾನ, 30ರಂದು ಸಂಜೆ 4 ಗಂಟೆಯಿಂದ ಯಕ್ಷಗಾನ ಸಂಘಟಕರಿಂದ ಕುಶಲವ ಮತ್ತು ಮಾಗಧ ವಧೆ ಯಕ್ಷಗಾನ, 31ರಂದು ಸಂಜೆ 5.30ರಿಂದ ಪರಂಪರೆಯ ಒಡ್ಡೋಲಗ, ನ.1ರಂದು ಸಂಜೆ 4 ಗಂಟೆಯಿಂದ ಅಭಿನೇತ್ರಿ ವಿಧ್ಯಾರ್ಥಿಗಳಿಂದ ವೀರಮಣಿ ಯಕ್ಷಗಾನ, ನಂತರ ವೈದ್ಯರಿಂದ ಜಾಂಬವತಿ ಯಕ್ಷಗಾನ, ನ.2ರಂದು ತೆಂಕು ಬಡಗಿನ ಯಕ್ಷಗಾನ ಕರ್ಣಪರ್ವ ಸಂಜೆ 5.30ರಿಂದ, ನ.3ಕ್ಕೆ ಸಂಜೆ 5ರಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಸಕ್ತರು, ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಂಕರ ಹೆಗಡೆ ಹಾಗೂ ಯಕ್ಷ ಸಂಘಟಕ ಗೌರೀಶ ಗುನಗಾ ವಿನಂತಿಸಿದ್ದಾರೆ.