ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯಲ್ಲಿ ಎಲೆಕ್ಟ್ರಿಕ್ ವಾಹನದ ಬ್ಯಾಟರಿಯ ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಆನ್ಲೈನ್ ಮುಖಾಂತರ ನಡೆದ ಈ ಕಾರ್ಯಕ್ರಮದಲ್ಲಿ ಇಂದೋರ್‌ನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾರ್ಯನಿರ್ವಹಿಸುತ್ತಿರುವ ಡಾ.ಎಸ್.ಜಾನಕಿರಾಮನ್ ಅವರು ಉಪನ್ಯಾಸಕರಾಗಿದ್ದರು.
ಎಲೆಕ್ಟ್ರಿಕ್ ವಾಹನದ ಬ್ಯಾಟರಿಯಲ್ಲಿ ಬಳಸುತ್ತಿರುವ ತಂತ್ರಜ್ಞಾನವನ್ನು ವಿವರಿಸುತ್ತಾ, ಬ್ಯಾಟರಿಗಳ ಉತ್ಪಾದನ ಹಂತದಲ್ಲಿ ಆಗುತ್ತಿರುವ ನೂತನ ಬದಲಾವಣೆಗಳನ್ನು ವಿವರಿಸಿದರು. ಬ್ಯಾಟರಿಯ ಕ್ಷಮತೆಯನ್ನು ಹೆಚ್ಚಿಸಲು ಇರುವ ಸವಾಲುಗಳನ್ನು ಎಳೆಯಾಗಿ ಬಿಡಿಸಿ ಹೇಳಿದರು. ಬ್ಯಾಟರಿಗಳ ಬಳಕೆಯ ಅವಧಿ ಮುಗಿದ ನಂತರ ಅವುಗಳ ಸಮರ್ಪಕ ವಿಲೇವಾರಿ ಅತ್ಯಗತ್ಯ ಎಂದು ನುಡಿದರು.
ಮಹಾವಿದ್ಯಾಲಯದ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗವು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‌ನ ವಿದ್ಯಾರ್ಥಿಗಳ ಅವತರಣಿಕೆಯ ಸಹಯೋಗದಲ್ಲಿ ಈ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ಡಾ.ಗುರುರಾಜ ಹತ್ತಿ ಮತ್ತು ಪ್ರೊ.ರವಿಕುಮಾರ್ ಟಿ. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ಎಲ್ಲಾ ಬೋಧಕೇತರ ಸಿಬ್ಬಂದಿ ಹಾಗೂ 200ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.