ಮುಂಡಗೋಡ: ಕೇಂದ್ರ ಸರ್ಕಾರವು ಜಲ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ತಾಲೂಕು ಮಟ್ಟದಲ್ಲಿ ಯೋಜಿತ ಕಾಮಗಾರಿಗಳನ್ನು ಕೈಗೊಂಡು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಬಿ.ಕಟ್ಟಿ ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಲಸಂಜೀವಿನಿ ಜಲ ಸಂಜೀವಿನಿ ಕಾರ್ಯಕ್ರಮದಡಿ ಜಿಯೋ ಸ್ಪೆಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಅನುಷ್ಠಾನದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಎರಡು ದಿನಗಳ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಲ ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಅನುಸರಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾನ ಇಲಾಖೆಯ ಸಹಯೋಗದಲ್ಲಿ ಜಲ ಸಂಜೀವಿನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕಿದೆ ಎಂದು ತಾಲೂಕು ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಟಿ.ವೈ.ದಾಸನಕೊಪ್ಪ ತಿಳಿಸಿದರು.
ಈ ವೇಳೆ ಯಲ್ಲಾಪುರ ತಾಲೂಕು ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಅವರು ತಂತ್ರಜ್ಞಾನ ಆಧಾರಿತ ನೀರಿನ ಆಯವ್ಯಯ ವಿಷಯದ ಅರಿವು ಮೂಡಿಸಿದರೆ, ತಾಂತ್ರಿಕ ಸಂಯೋಜಕರಾದ ಮಹೇಶ ಪಟಗಾರ್ ಹಾಗೂ ಸುಮೀರ್ ಗಿರಪ್ ಜಲಾನಯನ ಹಾಗೂ ಜಿಐಎಸ್ ತಂತ್ರಾಂಶ ಹಾಗೂ ಯೋಜನೆಯ ತಾಂತ್ರಿಕ ವಿಷಯಗಳಲ್ಲಿ ಪಂಚಾಯತ್ ಹಾಗೂ ಇಲಾಖೆಯ ಪಾತ್ರದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಅಧಿಕಾರಿಗಳು, ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕಾ ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ಸ್, ಬಿಎಫ್ಟಿ, ಸಿಬ್ಬಂದಿ ಇದ್ದರು.